ನವದೆಹಲಿ: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
'ಏರುಗತಿಯಾಗುತ್ತಿರುವ ದೇಶೀಯ ಎಲ್‌ಪಿಜಿ ಬೆಲೆಯ ಜ್ವಾಲೆಯು ಜನ ಸಾಮಾನ್ಯರ ಅಡುಗೆ ಮನೆಯನ್ನು ಸುಟ್ಟು ಕರಕಲಾಗಿದೆ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರವು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹89 ರಷ್ಟು ಹೆಚ್ಚಿಸಿದೆ'. ಈ ಸಂಬಂಧ ಖರ್ಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೊದಲನೆಯದಾಗಿ, 'ಸಂಸತ್ತಿನಲ್ಲಿ ಪಶ್ಚಿಮ ಏಷ್ಯಾ ಯುದ್ಧದಿಂದಾಗಿ 41 ದೇಶಗಳಿಂದ ಇಂಧನ ಪೂರೈಸುವ ಬಗ್ಗೆ ಪ್ರಧಾನಿ ಮೋದಿ ಸಮರ್ಥನೆಯನ್ನು ನೀಡಿದ್ದರು. ಅದೀಗ ಏನಾಯಿತು? ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಎಲ್‌ಪಿಜಿ ಕೊರತೆ ಏಕೆ ಕಾಡುತ್ತಿದೆ?' ಎಂದಿದ್ದಾರೆ.
'ಎರಡನೇಯದಾಗಿ 2025-26ರಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ 5.56 ಕೋಟಿ ಕುಟುಂಬಗಳು ಒಂದೇ ಒಂದು ಮರುಪೂರಣವನ್ನು ಪಡೆದಿಲ್ಲ. ಈ ಪೈಕಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೂ ಮುನ್ನವೇ 3.30 ಕೋಟಿ ಕುಟುಂಬಗಳು ಒಂದೇ ಎಂದು ರಿಫಿಲ್ ಲಭ್ಯವಾಗಿಲ್ಲ. ಇದು ಮೋದಿ ಸರ್ಕಾರದ ಲೂಟಿಯಲ್ಲವೇ?'

