ಕೊಲ್ಹಾಪುರ: ನಿರಂತರವಾಗಿ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗೆಟ್ಟಿದ್ದು, ಈ ಜನವಿರೋಧಿ ನೀತಿಗಾಗಿ ಕೇಂದ್ರ ಸರ್ಕಾರವು ಭಾರಿ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಾದ್ಯಂತ ಜನಸಾಮಾನ್ಯರು ಹಣದುಬ್ಬರದಿಂದಾಗಿ ತತ್ತರಿಸಿ ಹೋಗಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಕೇಂದ್ರ ಸಚಿವರೂ ಆದ ಶರದ್ ಪವಾರ್ ತೀವ್ರವಾಗಿ ಪ್ರಶ್ನಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ದರ ಏರಿಕೆಯ ನೆಪವೊಡ್ಡಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಮತ್ತೆ ₹29 ಹೆಚ್ಚಳ ಮಾಡಿವೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸಿಲಿಂಡರ್ ದರ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ, ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮಾರ್ಚ್ 7ರಂದು ಸಿಲಿಂಡರ್ ದರವನ್ನು ₹60 ಹೆಚ್ಚಿಸಲಾಗಿತ್ತು.
ಇತ್ತೀಚಿನ ಎಲ್‌ಪಿಜಿ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಶರದ್ ಪವಾರ್, 'ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇವರ ನಿಯಂತ್ರಣ ಎಂದರೆ ಜನರಿಗೆ ಹಂತ ಹಂತವಾಗಿ ಶಾಕ್ ನೀಡುವುದು ಎಂದರ್ಥ. ಈ ದುಬಾರಿ ಬೆಲೆ ಏರಿಕೆಗೆ ಕಾರಣರಾದವರು ಮುಂದಿನ ದಿನಗಳಲ್ಲಿ ತಕ್ಕ ರಾಜಕೀಯ ಬೆಲೆ ತೆರಬೇಕಾಗುತ್ತದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

