ಶ್ರೀನಗರ: ಕಳೆದ ಸುಮಾರು ಮೂರು ದಶಕಗಳಿಂದ ಜಮ್ಮು-ಕಾಶ್ಮೀರದ ಯುವ ಪೀಳಿಗೆಯನ್ನು ಕೇವಲ ಸಂಘರ್ಷ ಮತ್ತು ಭದ್ರತಾ ದೃಷ್ಟಿಯಿಂದಲೇ ನೋಡಲಾಗುತ್ತಿತ್ತು. ಅಲ್ಲಿನ ಯುವಕರು ಎಷ್ಟು ಪ್ರಮಾಣದಲ್ಲಿ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದಾರೆ ಎಂಬುದನ್ನು ಸರ್ಕಾರಗಳು ಗಮನಿಸುತ್ತಿದ್ದರೆ, ಸದ್ಯ ಎಷ್ಟು ಜನ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಭದ್ರತಾ ಪಡೆಗಳು ಲೆಕ್ಕ ಹಾಕುತ್ತಿದ್ದವು.
ರಾಜಕೀಯ ಚರ್ಚೆಗಳೆಲ್ಲವೂ ಕೇವಲ ಹಿಂಸಾಚಾರ ಹಾಗೂ ಅದನ್ನು ಹತ್ತಿಕ್ಕುವ ವಿಷಯಗಳಿಗಷ್ಟೇ ಸೀಮಿತವಾಗಿದ್ದವು. ಆದರೆ ಇಂದು ಕಾಶ್ಮೀರದ ಕಥೆ ಸಂಪೂರ್ಣವಾಗಿ ಬದಲಾಗುತ್ತಿದೆ.
ಉಗ್ರರ ನೇಮಕಾತಿಯಲ್ಲಿ ಭಾರಿ ಕುಸಿತ:
ಭದ್ರತಾ ಅಧಿಕಾರಿಗಳ ಪ್ರಕಾರ, ಸ್ಥಳೀಯ ಉಗ್ರಗಾಮಿ ನೇಮಕಾತಿ ಪ್ರಕ್ರಿಯೆ ಬಹುತೇಕ ಕಣ್ಮರೆಯಾಗಿದೆ. ಒಂದು ಕಾಲದಲ್ಲಿ ಸಾವಿರಾರು ಯುವ ಕಾಶ್ಮೀರಿಗಳನ್ನು ಉಗ್ರಗಾಮಿತ್ವದತ್ತ ಆಕರ್ಷಿಸಲಾಗುತ್ತಿತ್ತು. 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕವೂ ಉಗ್ರ ಸಂಘಟನೆಗೆ ಸೇರುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.
ಕಾಶ್ಮೀರಿ ಯುವಕರು ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗುತ್ತಿದ್ದರು ಅಥವಾ ಸ್ಥಳೀಯ ಉಗ್ರ ಸಂಘಟನೆಗಳನ್ನು ಸೇರುತ್ತಿದ್ದರು. 2018ರ ಒಂದೇ ವರ್ಷದಲ್ಲಿ ಸುಮಾರು 200 ಯುವಕರು ಉಗ್ರ ಸಂಘಟನೆಗಳನ್ನು ಸೇರಿಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಬಹುತೇಕ ಅಸ್ತಿತ್ವದಲ್ಲಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಇತ್ತೀಚೆಗೆ ತಿಳಿಸಿದ್ದಾರೆ.
1989 ರಲ್ಲಿ ದಂಗೆ ಭುಗಿಲೆದ್ದ ನಂತರ ಕಣಿವೆ ಪ್ರದೇಶದಲ್ಲಿ ಅತ್ಯಂತ ಮಹತ್ವದ ಬದಲಾವಣೆಗಳಾಗಿವೆ ಎಂದೂ ಭದ್ರತಾ ಪಡೆಗಳು ಹೇಳಿವೆ.
ಬದಲಾದ ಯುವಕರ ಆದ್ಯತೆ:
ಸ್ಥಳೀಯ ಉಗ್ರಗಾಮಿತ್ವದ ಕಗ್ಗಂಟು ಬಹುತೇಕ ನಿವಾರಣೆಯಾಗಿದ್ದರೂ, ಕಾಶ್ಮೀರದ ಯುವ ಪೀಳಿಗೆಯ ಆಸೆ ಮತ್ತು ಆಕಾಂಕ್ಷೆಗಳು ಈಗ ಬೇರೆಯ ರೂಪ ಪಡೆದುಕೊಂಡಿವೆ. ಒಂದು ಕಾಲದಲ್ಲಿ ಸಂಘರ್ಷದ ಕುರಿತು ಮಾತನಾಡುತ್ತಿದ್ದ ಯುವಕರು ಈಗ ಶಿಕ್ಷಣ, ಉದ್ಯೋಗ ಮತ್ತು ಕಾಶ್ಮೀರದಿಂದ ಹೊರಗಿರುವ ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು:
ಒಂದು ಕಾಲದಲ್ಲಿ ಉಗ್ರರ ನೇಮಕಾತಿಯ ಕೇಂದ್ರಗಳಾಗಿದ್ದ ದಕ್ಷಿಣ ಕಾಶ್ಮೀರದ ಶಾಲೆ ಮತ್ತು ಕೋಚಿಂಗ್ ಸೆಂಟರ್‌ಗಳಲ್ಲಿ ಬದಲಾವಣೆ ಗೋಚರಿಸುತ್ತಿದೆ. ವಿದ್ಯಾರ್ಥಿಗಳು ನೀಟ್, ಜೆಇಇ, ಸಿಯುಇಟಿ ಮತ್ತು ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುತ್ತಾರೆ ದಕ್ಷಿಣ ಕಾಶ್ಮೀರದ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರು.
ವಲಸೆ:
ಉನ್ನತ ಶಿಕ್ಷಣ ಮತ್ತು ಉದ್ಯೋಗದ ಹುಡುಕಾಟದಲ್ಲಿರುವ ಕಾಶ್ಮೀರದ ಯುವಕರು ಭಾರತದ ಇತರೆ ದೊಡ್ಡ-ದೊಡ್ಡ ನಗರಗಳಿಗೆ ಹಾಗೂ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಬೆಳೆಯುತ್ತಿರುವ ಆಕಾಂಕ್ಷೆಗಳು:
ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಭದ್ರತೆ ಈಗ ಕಾಶ್ಮೀರಿ ಯುವಕರ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಇಂದಿನ ಯುವಕರು ಸಾಂಪ್ರದಾಯಿಕ ಆಯ್ಕೆಗಳನ್ನು ಮೀರಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಕಾಶ್ಮೀರ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಡಾ. ಫರೂಖ್ ಫಹೀಮ್ ಹೇಳಿದ್ದಾರೆ.
ಯುವ ಪೀಳಿಗೆಯ ಮುಂದಿರುವ ಸವಾಲುಗಳು:
ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದ್ದರೂ, ಯುವಕರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಬದಲಾಗಿಲ್ಲ. ಸದ್ಯ ಕಾಶ್ಮೀರಿ ಯುವಕರು ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ..
ನಿರುದ್ಯೋಗ: ಯುವಕರಲ್ಲಿ ನಿರುದ್ಯೋಗದ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಸರ್ಕಾರಿ ಉದ್ಯೋಗಗಳಿಗಾಗಿ ತೀವ್ರ ಪೈಪೋಟಿ ನಡೆಯುತ್ತಲೇ ಇದೆ.
ಮಾದಕ ದ್ರವ್ಯಗಳ ಜಾಲ: ಕಣಿವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಕಳ್ಳಸಾಗಣೆ ಮತ್ತು ಯುವಕರು ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಾನೂನು ಜಾರಿ ಸಂಸ್ಥೆಗಳಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

