ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಮರಣಪತ್ರವನ್ನು ಲಗತ್ತಿಸದ ಆರೋಪದ ಮೇರೆಗೆ ಪೊಲೀಸ್ ತನಿಖಾಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
'ಆಕಾಂಕ್ಷಿಯ ಮರಣಪತ್ರವನ್ನು ಠಾಣಾ ಡೈರಿಯಲ್ಲಿ ಉಲ್ಲೇಖಸಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಅದನ್ನು ಲಗತ್ತಿಸಿಯೇ ಇಲ್ಲ' ಎಂದು ಡಿಸಿಪಿ (ವಲಯ 2) ನಿತ್ಯಾನಂದ ಝಾ ಹೇಳಿದರು.
'ಈ ಕಾರ್ಯದಲ್ಲಿ ಲೋಪ ಎಸಗಿದ ಅಂಬಾಜಾರಿ ಠಾಣೆಯ ತನಿಖಾಧಿಕಾರಿ ನಿಖಿಲ್ ತಭಾನೆ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ' ಎಂದು ಅವರು ವಿವರಿಸಿದರು.
ನೀಟ್ ಪರೀಕ್ಷೆಗೆ ಮಧ್ಯ ಪ್ರದೇಶ ಮೂಲದ ಆಕಾಂಕ್ಷಿ ಚತುರ್ವೇದಿ (18) ಅವರು ಮೇ 20ರಂದು ನಾಗ್ಪುರದ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಅವರು ಬರೆದಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಕಾರಣಕ್ಕೆ ಎನ್‌ಟಿಎ ಆ ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21ಕ್ಕೆ ಮರು ಪರೀಕ್ಷೆ ನಿಗದಿಪಡಿಸಿದೆ.
'ಮರು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಬರುತ್ತವೆ ಎಂಬ ಖಾತರಿ ಇಲ್ಲ. ನನ್ನ ಈ ನಿರ್ಧಾರಕ್ಕಾಗಿ ಕ್ಷಮಿಸಿ' ಎಂದು ಮರಣ ಪತ್ರದಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು.

