ಚೆನ್ನೈ: 'ಡಿಎಂಕೆಗೆ ಮಾಹಿತಿ ನೀಡಿದ ಬಳಿಕವಷ್ಟೇ ತಮ್ಮ ಪಕ್ಷವು ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲವನ್ನು ನೀಡಿತ್ತು' ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಡಿಎಂಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡಿತ್ತು. ಇದು ಡಿಎಂಕೆ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಭಿನ್ನಮತ ಸೃಷ್ಟಿಸಿತ್ತು. 'ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿದಿದ್ದು, ದ್ರೋಹ ಬಗೆದಿದೆ' ಎಂದು ಡಿಎಂಕೆ ನಾಯಕರು ಆರೋಪಿಸಿದ್ದರು.
ಏಪ್ರಿಲ್ 23ರಂದು ನಡೆದ ತಮಿಳುನಾಡು ಚುನಾವಣೆಯಲ್ಲಿ ಟಿಎಂಕೆ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಚೊಚ್ಚಲ ಪ್ರಯತ್ನದಲ್ಲೇ ಅಧಿಕಾರಕ್ಕೇರಿತ್ತು. ಟಿವಿಕೆ ಸರ್ಕಾರ ರಚನೆಗೆ ಕಾಂಗ್ರೆಸ್‌ನ ಐದು ಮಂದಿ ಶಾಸಕರು ಬೆಂಬಲ ನೀಡಿದ್ದರು.
'ಒಂದು ವೇಳೆ ಸದನದಲ್ಲಿ ಟಿವಿಕೆ ಬಹುಮತ ಗಳಿಸಲು ವಿಫಲವಾದರೆ ಹಾಗೂ ಇನ್ನೊಂದು ಚುನಾವಣೆಯನ್ನು ತಪ್ಪಿಸಲು ನಾವೆಲ್ಲರೂ ಬಯಸಿದ್ದೆವು. ಮೈತ್ರಿ ಪಕ್ಷಗಳ ಭಾವನೆಯೂ ಇದಾಗಿತ್ತು. ಜನರು ಸಹ ಮತ್ತೊಂದು ಚುನಾವಣೆಯನ್ನು ಬಯಸಿರಲಿಲ್ಲ' ಎಂದು ಚಿದಬರಂ ತಿಳಿಸಿದ್ದಾರೆ.
'ಟಿವಿಕೆ ಸರ್ಕಾರವನ್ನು ಬೆಂಬಲಿಸುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷವು ಸಿಪಿಐ, ವಿಸಿಕೆ ಮತ್ತು ಐಯುಎಂಎಲ್ ಸೇರಿದಂತೆ ಮೈತ್ರಿ ಪಕ್ಷಗಳಿಗೆ ತಿಳಿಸಿದೆ. ಒಂದೇ ಒಂದು ವ್ಯತ್ಯಾಸ ಏನೆಂದರೆ ಮೈತ್ರಿ ಪಕ್ಷಗಳು ಬೆಂಬಲ ನೀಡುವ ಒಂದು ದಿನ ಮೊದಲೇ ನಾವು ಟಿವಿಕೆಗೆ ಬೆಂಬಲ ಘೋಷಿಸಿದ್ದೆವು' ಎಂದು ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದ ವಿಜಯ್ ನೇತೃತ್ವದ ಟಿವಿಕೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರಳ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿತ್ತು. ಬಳಿಕ ಕಾಂಗ್ರೆಸ್, ವಿಸಿಕೆ, ಸಿಪಿಐ, ಸಿಪಿಐ(ಎಂ) ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಿತ್ತು.

