ಮುಂಬೈ: ಪ್ರಮುಖ ಗ್ರಾಹಕರನ್ನು ಭೇಟಿ ಮಾಡಲು ಧಾವಿಸುತ್ತಿದ್ದ ವೇಳೆ ಆಟೋ ಚಾಲಕನಿಗೆ 156 ರೂ. ಬದಲಾಗಿ ತಪ್ಪಾಗಿ 15,682 ರೂ. ಪಾವತಿಸಿದ ವ್ಯಕ್ತಿಗೆ, ಚಾಲಕ ಹಣವನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಮೂಲದ ಹಿಂಗ್ಲಿಷ್ ಕಂಪೆನಿಯ ಸಿಇಒ ಶುಭಂ ಗುನೆ ತಮ್ಮ ಈ ಅನುಭವವನ್ನು ಐiಟಿಞeಜIಟಿನಲ್ಲಿ ಹಂಚಿಕೊಂಡಿದ್ದಾರೆ.
ನಗರಕ್ಕೆ ಒಂದು ದಿನದ ಮಟ್ಟಿಗೆ ಬಂದಿದ್ದ ಅಂತರರಾಷ್ಟ್ರೀಯ ಗ್ರಾಹಕರೊಬ್ಬರನ್ನು ಭೇಟಿಯಾಗುವ ಆತುರದಲ್ಲಿ ಈ ತಪ್ಪು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಬೆಳಿಗ್ಗೆ 7 ಗಂಟೆಯ ಸಭೆಗೆ ತಡವಾಗುತ್ತಿದ್ದ ಕಾರಣ ಆಟೋ ಬಾಡಿಗೆಯಾದ 156 ರೂ. ಪಾವತಿಸಲು ಗೂಗಲ್ ಪೇ ಬಳಸಿದ ಅವರು, ತಪ್ಪಾಗಿ 15,682 ರೂ. ನಮೂದಿಸಿ ವಹಿವಾಟು ಪೂರ್ಣಗೊಳಿಸಿದ್ದರು. ಬಳಿಕ ಪಾವತಿಯ ವಿವರವನ್ನು ಪರಿಶೀಲಿಸದೆ ಭೇಟಿಗೆ ತೆರಳಿದ್ದರು.
ಆದರೆ, ಆ ಭೇಟಿಯೂ ನಿರೀಕ್ಷಿತ ಫಲ ನೀಡದೆ ನಿರಾಶಾದಾಯಕವಾಗಿ ಅಂತ್ಯಗೊಂಡಿತ್ತು. ಅಂತರರಾಷ್ಟ್ರೀಯ ಗ್ರಾಹಕನ ಎದುರು ತಮ್ಮ ಉದ್ಯಮವನ್ನು ಆತ್ಮವಿಶ್ವಾಸದಿಂದ ಮಂಡಿಸುವ ಅವಕಾಶವನ್ನು ಕಳೆದುಕೊಂಡಿದ್ದೇನೆ ಎಂದು ಭಾವಿಸಿ ಅವರು ಹತಾಶಗೊಂಡಿದ್ದರು.
ಸಭೆಯಿಂದ ಹೊರಬಂದಾಗ ಆಟೋ ಚಾಲಕ ಅಲ್ತಾಫ್ ಇನ್ನೂ ಅಲ್ಲೇ ಕಾಯುತ್ತಿದ್ದರು. ಪಾವತಿಯಲ್ಲಿ ಏನೋ ಸಮಸ್ಯೆ ಕಂಡುಬಂದಿರುವುದಾಗಿ ಅವರು ತಿಳಿಸಿದ್ದರು. ಬಳಿಕ, ಬಾಡಿಗೆಗಿಂತ ಹೆಚ್ಚಿನ ಮೊತ್ತ ವರ್ಗಾವಣೆಯಾಗಿರುವುದನ್ನು ಗಮನಿಸಿದ ಅಲ್ತಾಫ್, ಹೆಚ್ಚುವರಿ ಹಣವನ್ನು ತಕ್ಷಣವೇ ಹಿಂದಿರುಗಿಸಿದ್ದಾರೆ. ಅಲ್ಲದೆ, ತಮ್ಮ ಬಾಡಿಗೆಯಾದ 156 ರೂ.ನ್ನೂ ಪಡೆಯಲು ನಿರಾಕರಿಸಿದ್ದಾರೆ.
'ನಾನು ಯಾವ ಪರಿಸ್ಥಿತಿಯಲ್ಲಿದ್ದೇನೆ ಎಂಬುದು ಅವನಿಗೆ ಅರ್ಥವಾಗಿತ್ತು. "ನಮಗಿಬ್ಬರಿಗೂ ದಿನದ ಆರಂಭವಷ್ಟೇ, ಸರ್" ಎಂದು ಹೇಳಿ ಅಲ್ತಾಫ್ ಹಣ ಪಡೆಯಲು ನಿರಾಕರಿಸಿದರು' ಎಂದು ಶುಭಂ ಗುನೆ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪೋಸ್ಟ್ ನಲ್ಲಿ ಪಾವತಿ ಹಾಗೂ ಮರುಪಾವತಿಯ ವಿವರಗಳ ಚಿತ್ರವನ್ನೂ ಹಂಚಿಕೊಂಡಿದ್ದಾರೆ.
ಈ ಘಟನೆ ಅಲ್ಲಿಗೇ ಮುಗಿಯಲಿಲ್ಲ. ನಿರಾಶಾದಾಯಕವಾಗಿದ್ದ ಆ ಭೇಟಿಯ ಏಳು ದಿನಗಳ ಬಳಿಕ, ಅಂತರರಾಷ್ಟ್ರೀಯ ಗ್ರಾಹಕ ಮತ್ತೆ ಸಂಪರ್ಕಿಸಿ ಜೊತೆಯಾಗಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.
'ಗ್ರಾಹಕ ಸಹಕಾರಕ್ಕೆ ಸಮ್ಮತಿ ಸೂಚಿಸಿದ ತಕ್ಷಣ ನನ್ನ ಮನಸ್ಸು ಬೆಳಿಗ್ಗೆ ಭೇಟಿಯಾದ ಆ ಆಟೋ ಚಾಲಕನ ಕಡೆಗೆ ಹೊರಳಿತು' ಎಂದು ಗುನೆ ಬರೆದುಕೊಂಡಿದ್ದಾರೆ.
ಬಳಿಕ ಕೃತಜ್ಞತೆಯ ಸಂಕೇತವಾಗಿ ಅವರು ಅಲ್ತಾಫ್‌ಗೆ 500ರೂ. ಕಳುಹಿಸಿದರು. ಅಲ್ತಾಫ್ ಸ್ವೀಕರಿಸಲು ನಿರಾಕರಿಸಿದ್ದ ಬಾಡಿಗೆಯ ಜೊತೆಗೆ ಹೆಚ್ಚುವರಿ ಗೌರವಧನವಾಗಿ ಈ ಮೊತ್ತವನ್ನು ಪಾವತಿಸಿದ್ದರು.
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಅಲ್ತಾಫ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಇತರರ ತಪ್ಪಿನಿಂದ ಲಾಭ ಪಡೆಯುವವರೇ ಹೆಚ್ಚಿರುವ ಸಂದರ್ಭದಲ್ಲಿ ಅಲ್ತಾಫ್ ತೋರಿದ ಪ್ರಾಮಾಣಿಕತೆ ಮತ್ತು ಮಾನವೀಯತೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

