ನವದೆಹಲಿ: ಜಾಗತಿಕ ಮಟ್ಟದ ಸಂಘರ್ಷಗಳ ನಡುವೆಯೂ ದೇಶದ ಆರ್ಥಿಕತೆಯ ಬೆಳವಣಿಗೆ ದರವನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಸದಸ್ಯರ ಜೊತೆ ಶನಿವಾರ ಚರ್ಚೆ ನಡೆಸಿದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಮೇಲೆ ಹಾಗೂ ವಿಶ್ವದ ಇತರ ರಾಷ್ಟ್ರಗಳ ಮೇಲೆ ಯಾವ ಬಗೆಯ ಪರಿಣಾಮ ಆಗಿದೆ ಎಂಬುದರ ಬಗ್ಗೆ ಮಂಡಳಿಯ ಸದಸ್ಯರು ತಮ್ಮ ಅನಿಸಿಕೆಯನ್ನು ಪ್ರಧಾನಿಯವರ ಜೊತೆ ಹಂಚಿಕೊಂಡರು.
'ಆರ್ಥಿಕ ಸಲಹಾ ಮಂಡಳಿಯ ಸಭೆಯ ನೇತೃತ್ವ ವಹಿಸಿದ್ದೆ. ಭಾರತದ ಆರ್ಥಿಕ ಪರಿವರ್ತನೆ ಹಾಗೂ ದೀರ್ಘಾ ವಧಿಯ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂ ಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದೆವು' ಎಂದು ಪ್ರಧಾನಿ ಮೋದಿ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
'ಸುಧಾರಣೆಗಳನ್ನು ಜಾರಿಗೆ ತರುವ ಪಯಣಕ್ಕೆ ಹೆಚ್ಚಿನ ವೇಗ ನೀಡುವುದರ ಬಗ್ಗೆ, ಜೀವನದ ಮಟ್ಟ ಸುಧಾರಿಸುವ ಬಗ್ಗೆ ಹಾಗೂ ವಾಣಿಜ್ಯ ವಹಿವಾಟು ಗಳನ್ನು ಸುಲಲಿತ ಆಗಿಸುವ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳಲಾಯಿತು' ಎಂದು ಪ್ರಧಾನಿಯವರು ಹೇಳಿದ್ದಾರೆ.
ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡುವ ಬಗ್ಗೆ ಪ್ರಧಾನಿಯವರು ಹಾಗೂ ಮಂಡಳಿಯ ಸದಸ್ಯರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಮಂಡಳಿಯ ಸದಸ್ಯರಲ್ಲದೆ, ಪ್ರಧಾನಿ ಯವರ ಪ್ರಧಾನ ಕಾರ್ಯದರ್ಶಿಗಳಾದ ಪಿ.ಕೆ. ಮಿಶ್ರಾ ಮತ್ತು ಶಕ್ತಿಕಾಂತ ದಾಸ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು.
ಮಂಡಳಿಯಲ್ಲಿ ಅಧ್ಯಕ್ಷರಲ್ಲದೆ ಮೂವರು ಪೂರ್ಣಾವಧಿ ಸದಸ್ಯರು ಹಾಗೂ 11 ಮಂದಿ ಅರೆಕಾಲಿಕ ಸದಸ್ಯರು ಇದ್ದಾರೆ.

