ನವದೆಹಲಿ: ಕಳೆದ 12 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಕಲ್ಯಾಣ ಯೋಜನೆಗಳನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಭಾರತವು ಇಂದು ಹಲವು ಪ್ರಮುಖ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ. ಈ ಎಲ್ಲಾ ಬದಲಾವಣೆಗಳ ಕೇಂದ್ರಬಿಂದು ಬಡವರ ಕಲ್ಯಾಣವೇ ಆಗಿದೆ' ಎಂದು ಸೋಮವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಆಯುಷ್ಮಾನ್ ಭಾರತ್‌ನಂತಹ ಪ್ರಮುಖ ಯೋಜನೆಗಳನ್ನು ಪ್ರಸ್ತಾಪಿಸಿದರು. ಈ ಎಲ್ಲಾ ಉಪಕ್ರಮಗಳು ಜನಸಾಮಾನ್ಯರಿಗೆ ಗೌರವಯುತ ಜೀವನ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಸರಳ ಉದ್ದೇಶದಿಂದ ಮುನ್ನಡೆದಿವೆ ಎಂದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, 'ಕಳೆದ 12 ವರ್ಷಗಳಲ್ಲಿ ಭಾರತ ಕಂಡಿರುವ ಅಭಿವೃದ್ಧಿಯ ಮೂಲ ಪ್ರೇರಣೆ ಬಡವರು ಮತ್ತು ಹಿಂದುಳಿದಿರುವ ಜನರ ಕಲ್ಯಾಣವಾಗಿದೆ. ನಮ್ಮ ಸರ್ಕಾರವು ಯಾವಾಗಲೂ ಅಂತ್ಯೋದಯ ತತ್ವದಿಂದ ಪ್ರೇರಿತವಾಗಿದೆ. ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾದವರಿಗೆ ಪ್ರಗತಿಯ ಫಲಗಳು ತಲುಪುವಂತೆ ಮಾಡುವುದೇ ನಮ್ಮ ನಿರಂತರ ಪ್ರಯತ್ನವಾಗಿದೆ' ಎಂದು ಬರೆದುಕೊಂಡಿದ್ದಾರೆ.
'ಬಡವರ ಕಲ್ಯಾಣದ 12 ವರ್ಷಗಳು' (#12YearsOfGaribKalyan) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಬಡವರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
'ನೇರ ನಗದು ವರ್ಗಾವಣೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಸರ್ಕಾರದ ನೆರವು ಯಾವುದೇ ಮಧ್ಯವರ್ತಿಗಳಿಲ್ಲದೆ, ಅತ್ಯಂತ ಪಾರದರ್ಶಕವಾಗಿ ಜನರನ್ನು ನೇರವಾಗಿ ತಲುಪುತ್ತಿದೆ. ಇದು ಸೋರಿಕೆಯನ್ನು ತಡೆಗಟ್ಟಿದೆ. ಆಡಳಿತದ ದಕ್ಷತೆಯನ್ನು ಹೆಚ್ಚಿಸಿದೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಿದೆ. ಈ ಮೂಲಕ ಬಡವರ ಕಲ್ಯಾಣದ ಪಯಣವು ಮಾನವ ಸಬಲೀಕರಣ ಮತ್ತು ನಮ್ಮ ಕನಸಿನ ವಿಕಸಿತ ಭಾರತದ ನಿರ್ಮಾಣದತ್ತ ಒಂದು ಸಾಮೂಹಿಕ ಚಳವಳಿಯಾಗಿ ಮಾರ್ಪಟ್ಟಿದೆ' ಎಂದು ಮೋದಿ ವಿವರಿಸಿದ್ದಾರೆ.

