HEALTH TIPS

ವಿದೇಶಿ ವಿನಿಮಯ ಮೀಸಲು ನಿಧಿ ರಕ್ಷಿಸಲು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನ ಮಾರಾಟ: ವರದಿ ತಳ್ಳಿಹಾಕಿದ RBI

 ಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಒತ್ತಡಗಳ ನಡುವೆ, ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex Reserves) ಬಲಪಡಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಆಸರೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂಬ ವರದಿಯನ್ನು RBI ತಳ್ಳಿಹಾಕಿದೆ.


ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ RBI, "RBI ಚಿನ್ನವನ್ನು ಮಾರಾಟ ಮಾಡಿದೆ ಎಂಬ ವರದಿಗಳು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ತಪ್ಪು ಮಾಹಿತಿಯಿಂದ ಕೂಡಿವೆ ಎಂಬುದನ್ನು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸುತ್ತದೆ. ಈ ನಿಟ್ಟಿನಲ್ಲಿ, RBI ತನ್ನ ಮಾಸಿಕ ಬುಲೆಟಿನ್ ನಲ್ಲಿ ಭೌತಿಕ ಚಿನ್ನದ ದಾಸ್ತಾನಿನ ವಿವರಗಳನ್ನು ಬಹಿರಂಗಪಡಿಸುತ್ತದೆ. ಇದರ ಇತ್ತೀಚಿನ ಆವೃತ್ತಿಯು RBI ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇಂದಿನ ದಿನಾಂಕದವರೆಗೆ RBI ಬಳಿ ಇರುವ ಒಟ್ಟು ಭೌತಿಕ ಚಿನ್ನದ ದಾಸ್ತಾನು 880.52 ಟನ್ಗಳಷ್ಟೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ" ಎಂದು ಸ್ಪಷ್ಟನೆ ನೀಡಿದೆ.

"ಆದ್ದರಿಂದ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸಾರ್ವಜನಿಕರು RBI ನಿಯತಕಾಲಿಕವಾಗಿ ಪ್ರಕಟಿಸುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಮತ್ತು ಇಂತಹ ವರದಿಗಳನ್ನು ಆಧರಿಸಬಾರದು" ಎಂದು RBI ಸಲಹೆ ನೀಡಿದೆ.

ಇದಾದ ಬೆನ್ನಲ್ಲೇ, ಬ್ಲೂಮ್ಬರ್ಗ್ ಪ್ರಕಟಿಸಿದ್ದ ವರದಿಯ ಕುರಿತು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಕೂಡ 'ಫ್ಯಾಕ್ಟ್ ಚೆಕ್' ಮಾಡಿ ಪೋಸ್ಟ್ ಹಂಚಿಕೊಂಡಿದೆ. RBI ದತ್ತಾಂಶವನ್ನು ಉಲ್ಲೇಖಿಸಿರುವ PBI, ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಕೇಂದ್ರ ಬ್ಯಾಂಕ್ ಹೊಂದಿರುವ ಚಿನ್ನದ ಪಾಲು ವಾಸ್ತವವಾಗಿ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ RBI ತನ್ನ ಚಿನ್ನದ ದಾಸ್ತಾನನ್ನು ಕಡಿಮೆ ಮಾಡಿಕೊಂಡಿದೆ ಎಂಬ ಮಾಧ್ಯಮಗಳ ವಾದ ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗಿದೆ.

ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ PBI, "ಬ್ಲೂಮ್ಬರ್ಗ್ ಪ್ರಕಟಿಸಿರುವ ವರದಿಯೊಂದರಲ್ಲಿ RBI ಸರಿಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ಹೇಳಲಾಗಿದೆ. ಈ ವಾದವು ಸಂಪೂರ್ಣವಾಗಿ ಸುಳ್ಳು" ಎಂದು ಸ್ಪಷ್ಟಪಡಿಸಿದೆ.

RBI ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ PBIಯ ಫ್ಯಾಕ್ಟ್-ಚೆಕ್ ಘಟಕವು, "RBI ನೀಡಿರುವ ದತ್ತಾಂಶಗಳ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇಕಡಾ 13.92 ರಷ್ಟಿತ್ತು. ಇದು ಮಾರ್ಚ್ 31ರ ವೇಳೆಗೆ ಶೇಕಡಾ 16.70ಕ್ಕೆ ಏರಿಕೆಯಾಗಿದ್ದು, ಮೇ 22ರ ವೇಳೆಗೆ ಮತ್ತಷ್ಟು ಅಂದರೆ ಶೇಕಡಾ 16.85ಕ್ಕೆ ತಲುಪಿದೆ" ಎಂದು ತಿಳಿಸಿದೆ.

ಕೇಂದ್ರ ಬ್ಯಾಂಕ್ ತನ್ನ ಬಳಿ ಇರುವ ಭೌತಿಕ ಚಿನ್ನದ ದಾಸ್ತಾನಿನ ವಿವರಗಳನ್ನು ಮಾಸಿಕ ಬುಲೆಟಿನ್ ಮೂಲಕ ನಿರಂತರವಾಗಿ ಬಹಿರಂಗಪಡಿಸುತ್ತಲೇ ಇರುತ್ತದೆ ಮತ್ತು ಈ ದಾಸ್ತಾನಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು PBI ಪುನರುಚ್ಚರಿಸಿದೆ. "ಭೌತಿಕ ಚಿನ್ನದ ದಾಸ್ತಾನನ್ನು RBI ತನ್ನ ಮಾಸಿಕ ಬುಲೆಟಿನ್ನಲ್ಲಿ ಬಹಿರಂಗಪಡಿಸುತ್ತದೆ. ಇದರ ಇತ್ತೀಚಿನ ಆವೃತ್ತಿಯು RBI ವೆಬ್ಸೈಟ್ ನಲ್ಲಿ ಲಭ್ಯವಿದ್ದು, ಇಂದಿನವರೆಗೆ ಈ ದಾಸ್ತಾನಿನ ಸ್ಥಿತಿ ಬದಲಾಗದೆ ಯಥಾಸ್ಥಿತಿಯಲ್ಲಿದೆ" ಎಂದು ಅದು ಹೇಳಿದೆ.

►ಬ್ಲೂಮ್ಬರ್ಗ್ ವರದಿ 'ಸುಳ್ಳು' ಎಂದ ಸರ್ಕಾರ

'ಬ್ಲೂಮ್ಬರ್ಗ್ ಎಕನಾಮಿಕ್ಸ್' ನಡೆಸಿದ ವಿಶ್ಲೇಷಣೆಯನ್ನಾಧರಿಸಿ ಪ್ರಕಟವಾಗಿದ್ದ ವರದಿಯೊಂದರಲ್ಲಿ, ಮೇ 22ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ RBI ತನ್ನ ಚಿನ್ನದ ಮೀಸಲು ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿರಬಹುದು ಎಂದು ಹೇಳಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ಅಧಿಕೃತ ಸ್ಪಷ್ಟನೆ ನೀಡಿದೆ.

ಸಂಸ್ಥೆಯ ಭಾರತದ ಹಿರಿಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ಅವರ ಪ್ರಕಾರ, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇಂದ್ರ ಬ್ಯಾಂಕ್ ಸರಿಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ ಮತ್ತು ಅದೇ ಸಮಯದಲ್ಲಿ ತನ್ನ ವಿದೇಶಿ ಕರೆನ್ಸಿ ಸ್ವತ್ತುಗಳಿಗೆ ಸುಮಾರು 7.5 ಶತಕೋಟಿ ಡಾಲರ್ ಮೊತ್ತವನ್ನು ಸೇರ್ಪಡೆ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸಿದ್ದರು.

ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿರುವ ಕಾರಣ, RBI ಬಳಿ ಇರುವ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯವು ಸಹಜವಾಗಿಯೇ ಹೆಚ್ಚಾಗಬೇಕಿತ್ತು ಎಂಬುದು ಅವರ ವಿಶ್ಲೇಷಣೆಯಾಗಿತ್ತು. ಆದರೆ, ಇಂತಹ ಪೂರಕ ಪರಿಸ್ಥಿತಿ ಇದ್ದಾಗಲೂ ಚಿನ್ನದ ಸ್ವತ್ತುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿರುವುದು, ಕೇಂದ್ರ ಬ್ಯಾಂಕ್ ಚಿನ್ನವನ್ನು ಮಾರಾಟ ಮಾಡಿರಬಹುದಾದ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಗುಪ್ತಾ ವಾದಿಸಿದ್ದರು.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಹಾರ್ಮುಝ್ ಜಲಸಂಧಿಯ ಮೂಲಕ ನಡೆಯುವ ಹಡಗು ಸಾಗಣೆ ಮಾರ್ಗಗಳಲ್ಲಿ ಉಂಟಾಗಿರುವ ಅಡೆತಡೆಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇದರಿಂದ ಬಂಡವಾಳದ ಹೊರಹರಿವು ಹೆಚ್ಚಾಗಿದ್ದು, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿದೆ. ಈ ಆತಂಕಗಳ ಹಿನ್ನೆಲೆಯಲ್ಲೇ RBI ಚಿನ್ನ ಮಾರಾಟದಂತಹ ನಿರ್ಧಾರಕ್ಕೆ ಮುಂದಾಗಿರಬಹುದು ಎಂದು ಬ್ಲೂಮ್ಬರ್ಗ್ ವರದಿ ಹೇಳಿತ್ತು.

ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿರುವುದು ಮತ್ತು ರೂಪಾಯಿ ಮೌಲ್ಯದ ಮೇಲಿನ ಒತ್ತಡ ತೀವ್ರಗೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ, ನೀತಿನಿರೂಪಕರು ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಬಳಸಲು ಸಾಧ್ಯವಾಗುವಂತಹ ವಿದೇಶಿ ಕರೆನ್ಸಿ ನಿಧಿಯನ್ನು (Foreign Currency Reserves) ತಮ್ಮ ಬಳಿ ಇಟ್ಟುಕೊಳ್ಳಲು ಆದ್ಯತೆ ನೀಡಿರಬಹುದು ಎಂದು ಕೂಡ ಈ ವರದಿ ಸೂಚಿಸಿತ್ತು.

2026ರ ಮಾರ್ಚ್ ಅಂತ್ಯದ ವೇಳೆಗೆ, RBI ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ದಾಸ್ತಾನನ್ನು ಹೊಂದಿತ್ತು. ಎಪ್ರಿಲ್ ನಲ್ಲಿ ಬಿಡುಗಡೆಯಾದ ಕೇಂದ್ರ ಬ್ಯಾಂಕ್ ನ ಅರ್ಧವಾರ್ಷಿಕ ವಿದೇಶಿ ವಿನಿಮಯ ವರದಿಯ ಪ್ರಕಾರ, ಈ ಒಟ್ಟು ಮೀಸಲು ನಿಧಿಯ ಸುಮಾರು ಶೇಕಡಾ 77ರಷ್ಟು ಚಿನ್ನವನ್ನು ಭಾರತದ ಒಳಗೇ ಸಂಗ್ರಹಿಸಿಡಲಾಗಿದೆ. ಆರು ತಿಂಗಳ ಹಿಂದೆ ಇದು ಶೇಕಡಾ 66ರಷ್ಟಿತ್ತು. ಇದು ವಿದೇಶಗಳಲ್ಲಿದ್ದ ಚಿನ್ನವನ್ನು ಮರಳಿ ಸ್ವದೇಶಕ್ಕೆ ತರುತ್ತಿರುವ ಪ್ರಮುಖ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ.

ತನ್ನ ವಿದೇಶಿ ಚಿನ್ನದ ದಾಸ್ತಾನಿನ ಬಹುಪಾಲು ಭಾಗವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ ಸಂಸ್ಥೆಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು RBI ತಿಳಿಸಿದೆ. ಉಕ್ರೇನ್ ಸಂಘರ್ಷದ ಬಳಿಕ ರಷ್ಯಾದ ಜಾಗತಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾದ ಘಟನೆಯಿಂದ ಎಚ್ಚೆತ್ತಿರುವ ವಿಶ್ವದ ಹಲವು ಉದಯೋನ್ಮುಖ ಮಾರುಕಟ್ಟೆಗಳ ಕೇಂದ್ರ ಬ್ಯಾಂಕ್ಗಳು, ತಮ್ಮ ಚಿನ್ನದ ಮೀಸಲು ನಿಧಿಯ ಸಿಂಹಪಾಲನ್ನು ಸ್ವದೇಶದಲ್ಲೇ ಇಟ್ಟುಕೊಳ್ಳಲು ಒಲವು ತೋರುತ್ತಿವೆ. RBIನ ಈ ಇತ್ತೀಚಿನ ನಡೆ ಕೂಡ ಇದೇ ಜಾಗತಿಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries