ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೊಸದಿಲ್ಲಿಯಲ್ಲಿ ವೆನೆಝುವೆಲಾದ ಕಾರ್ಯಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜೊತೆ ಗುರುವಾರ ಮಾತುಕತೆಗಳನ್ನು ನಡೆಸಿದರು. ಇಂಧನ, ವ್ಯಾಪಾರ ಹಾಗೂ ಹೂಡಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಪಡಿಸುವಿಕೆ ಮಾತುಕತೆಯ ಕೇಂದ್ರಬಿಂದುಗಳಾಗಿದ್ದವು.
ಪಶ್ಚಿಮ ಏಶ್ಯ ಬಿಕ್ಕಟ್ಟಿನ ಪರಿಣಾಮವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವುದರಿಂದ ಕಚ್ಚಾ ತೈಲದ ಆಮದನ್ನು ವಿಕೇಂದ್ರೀಕರಿಸುತ್ತಿರುವ ಸಂದರ್ಭದಲ್ಲಿ ವೆನೆಝುವೆಲಾ ಉಪಾಧ್ಯಕ್ಷೆ ಅವರು ಭಾರತಕ್ಕೆ ಭೇಟಿ ನೀಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಹೊಸದಿಲ್ಲಿಗೆ ಬುಧವಾರ ಆಗಮಿಸಿದ ರೊಡ್ರಿಗಸ್ ನೇತೃತ್ವದ ವೆನೆಝವೆಲಾ ನಿಯೋಗವು ವಿದೇಶಾಂಗ ವ್ಯವಹಾರಗಳು, ಆರ್ಥಿಕತೆ ಹಾಗೂ ಹಣಕಾಸು, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಹನ ಹಾಗೂ ಮಾಹಿತಿ ಮತ್ತು ಸರಕುಸಾಗಣೆ ಮತ್ತಿತರ ಇಲಾಖೆಗಳನ್ನು ನಿರ್ವಹಿಸುವ ಸಚಿವರ ಉನ್ನತ ಮಟ್ಟದ ನಿಯೋಗವನ್ನು ಒಳಗೊಂಡಿದೆ.
ಜನವರಿಯಲ್ಲಿ ಅಮೆರಿಕನ್ ಪಡೆಗಳು ವೆನೆಝುವೆಲಾ ಅಧ್ಯಕ್ಷ ನಿಕೊಲಾ ಮಡುರೋ ಅವರನ್ನು ಬಂಧಿಸಿದ ಬಳಿಕ ವೆನೆಝುವೆಲಾದ ಕಾರ್ಯಾಧ್ಯಕ್ಷರಾಗಿ ರೊಡ್ರಿಗಝ್ ಅಧಿಕಾರವಹಿಸಿಕೊಂಡಿದ್ದಾರೆ.
ಭಾರತವು, ವೆನೆಝವೆಲಾದ ಘನ ಕಚ್ಚಾ ತೈಲದ ಅತಿದೊಡ್ಡ ಸಂಸ್ಕರಣಾದಾರ ರಾಷ್ಟ್ರಗಳಲ್ಲೊಂದಾಗಿದೆ. ಪ್ರತಿ ದಿನ 4 ಲಕ್ಷ ಬ್ಯಾರೆಲ್‌ಗಳಿಗೂ ಅಧಿಕ ಕಚ್ಚಾ ತೈಲವನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಆದಾಗ್ಯೂ 2020ರಲ್ಲಿ ಅಮೆರಿಕವು, ವೆನೆಝುವೆಲಾದ ಕಚ್ಚಾ ತೈಲದ ಆಮದಿಗೆ ನಿರ್ಬಂಧಗಳನ್ನು ವಿಧಿಸಿದ ಬಳಿಕ ತೈಲ ಖರೀದಿ ಸ್ಥಗಿತಗೊಂಡಿದೆ.

