ಕಾಸರಗೋಡು: ಗುದದ್ವಾರದಲ್ಲಿ ಚಿನ್ನದ ಬಿಲ್ಲೆಗಳನ್ನಿರಿಸಿ ಕಳ್ಳಸಾಗಾಟಕ್ಕೆ ಯತ್ನಿಸಿದ ಕುಂಬಳೆ ನಿವಾಸಿಯನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಕಸ್ಟಂಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕುಂಬಳೆ ನಿವಾಸಿ ಅಬ್ದುಲ್ ರಶೀದ್ ಬಂಧಿತ. ಈತನಿಂದ ಒಂದುವರೆ ಕೋಟಿಗೂ ಹೆಚ್ಚು ಮೌಲ್ಯದ 1.281 ಕಿ.ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಶಾರ್ಜಾದಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದ ಅಬ್ದುಲ್ ರಶೀದ್‍ನ ನಡಿಗೆ ಹಾಗೂ ಚಲನವಲನದ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ಈತನನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ. ನಂತರ ಎಕ್ಸ್‍ರೇ ಮೂಲಕ ತಪಾಸಣೆ ನಡೆಸಿದಾಗ ಗುದ ದ್ವಾರದಲ್ಲಿರಿಸಿದ್ದ ಕ್ಯಾಪ್ಸೂಲ್ ರೂಪದಲ್ಲಿ ಚಿನ್ನ ಪತ್ತೆಯಾಗಿದೆ. ಬಂಧಿತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ವಶಪಡಿಸಿಕೊಂಡಿರುವ ಚಿನ್ನದ ಒಟ್ಟು ಮೌಲ್ಯ 1.75ಕೋಟಿ ರೂ. ಅಂದಾಜಿಸಲಾಗಿದೆ. ಕೆಲವು ಸಮಯದಿಂದ ಕೇರಳದ ವಿವಿಧ ವಿಮಾನ ನಿಲ್ದಾಣಗಳ ಮೂಲಕ ಕಡಿಮೆಯಾಗಿದ್ದ ಚಿನ್ನಕಳ್ಳಸಾಗಾಟ ಮತ್ತೆ ಸಕ್ರಿಯಗೊಂಡಿದೆ.

