ಮುಂಬೈ: ಬ್ಯಾಂಕಾಕ್‌ನಿಂದ ಮುಂಬೈಗೆ ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖ್ಯಾತ ಮಾಡೆಲ್ ಹರ್ಷಾ ಸನ್ನಿ (29) ಅವರನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹11.82 ಕೋಟಿ ಮೌಲ್ಯದ 11.8 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ ಮಾದಕ ವಸ್ತು
ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಬೈಗೆ ಆಗಮಿಸಿದ ಹರ್ಷಾ ಸನ್ನಿ ಅವರ ವರ್ತನೆಯ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆಕೆಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಕೆಯ ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಿಟ್ಟಿದ್ದ 12 ವ್ಯಾಕ್ಯೂಮ್-ಸೀಲ್ಡ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಮಾದಕ ದ್ರವ್ಯ ಪತ್ತೆ ಹಚ್ಚುವ ಎನ್‌ಡಿಪಿಎಸ್ ಕಿಟ್ ಬಳಸಿ ಪರೀಕ್ಷಿಸಿದಾಗ, ಅದು ಪ್ರೀಮಿಯಂ ಗುಣಮಟ್ಟದ ಹೈಡ್ರೋಪೋನಿಕ್ ಗಾಂಜಾ ಎಂದು ದೃಢಪಟ್ಟಿದೆ.
ಯಾರು ಈ ಹರ್ಷಾ ಸನ್ನಿ?
ಬಂಧಿತ 29 ವರ್ಷದ ಹರ್ಷಾ ಸನ್ನಿ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ 'ಮಿಸಸ್ ಕೇರಳ ಗ್ಲೋಬಲ್' ಸೌಂದರ್ಯ ಸ್ಪರ್ಧೆಯಲ್ಲಿ ಆಕೆ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. ಇದರೊಂದಿಗೆ ಆಕೆ ಖಾಸಗಿ ಬ್ಯಾಂಕೊಂದರಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿಯೂ ಕೆಲಸ ಮಾಡುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ಪರ ವಕೀಲರ ವಾದ
'ಹರ್ಷಾ ಸನ್ನಿ ಅವರು ಪ್ರವಾಸದ ಜತೆಗೆ ನೇಲ್-ಆರ್ಟ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಬ್ಯಾಂಕಾಕ್‌ಗೆ ಹೋಗಿದ್ದರು. ಅಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಆಕೆಯ ನಂಬಿಕೆ ಗಳಿಸಿ, ಭಾರತಕ್ಕೆ ಒಂದು ಬ್ಯಾಗ್ ತಲುಪಿಸುವಂತೆ ಕೇಳಿಕೊಂಡಿದ್ದ. ಬ್ಯಾಗ್‌ನಲ್ಲಿ ಏನಿದೆ ಎಂಬುದು ಆಕೆಗೆ ತಿಳಿದಿರಲಿಲ್ಲ. ಆಕೆಯನ್ನು ಈ ಅಂತರರಾಷ್ಟ್ರೀಯ ಜಾಲ ದಾಳವಾಗಿ ಬಳಸಿಕೊಂಡಿದೆ' ಎಂದು ಹರ್ಷಾ ಪರ ವಕೀಲ ಪ್ರಭಾಕರ್ ತ್ರಿಪಾಠಿ ವಾದಿಸಿದ್ದಾರೆ.
14 ದಿನಗಳ ನ್ಯಾಯಾಂಗ ಬಂಧನ
ಕಸ್ಟಮ್ಸ್ ಅಧಿಕಾರಿಗಳು ಹರ್ಷಾ ಸನ್ನಿ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಭಾರಿ ಡ್ರಗ್ಸ್ ದಂಧೆಯ ಹಿಂದೆ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಜಾಲ ಸಕ್ರಿಯವಾಗಿರುವ ಶಂಕೆ ಇದ್ದು, ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

