ಕೋಲ್ಕತ್ತ: ಇಲ್ಲಿನ ಸರ್ಕಾರಿ ಕಟ್ಟಡಕ್ಕೆ ಬೆಂಕಿ ತಗುಲಿ, ಒಳಗಡೆ ಇರಿಸಲಾಗಿದ್ದ 4 ಸಾವಿರ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಸಂಚಿನ ಅನುಮಾನವಿದೆ ಎಂದು ಪಶ್ಚಿಮ ಬಂಗಾಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಕ್ಷಿಣ ಕೋಲ್ಕತ್ತದ ಅಲಿಪೋರ ಪ್ರದೇಶದಲ್ಲಿರುವ ಒಂಬತ್ತು ಮಹಡಿಯ ಕಟ್ಟಡದ ಒಳಗಡೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿಯೇ ಸರ್ಕಾರದ ಹಲವು ಇಲಾಖೆ, ದಕ್ಷಿಣ 24 ಪರಗಣ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಚೇರಿ ಕೂಡ ಕಾರ್ಯನಿರ್ವಹಿಸುತ್ತಿತ್ತು.
'ಸುಮಾರು 4 ಸಾವಿರ ಇವಿಎಂಗಳು ಸುಟ್ಟು ಕರಕಲಾಗಿವೆ. ಇದರಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯ 10 ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆಯ ಇವಿಎಂಗಳು ಕೂಡ ಸೇರಿದ್ದವು' ಎಂದು ಆಗ್ನಿಶಾಮಕ ಹಾಗೂ ತುರ್ತುಸೇವೆಗಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ.
'ಇದು ಮಾಮೂಲಿ ಬೆಂಕಿಯಂತೆ ಕಾಣಿಸುತ್ತಿಲ್ಲ. ವಿಧ್ವಂಸಕ ಕೃತ್ಯ ನಡೆದಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುವುದು. 9 ಹಾಗೂ 10 ಮಹಡಿಯವರೆಗೂ ಬೆಂಕಿ ಹರಡಿದ್ದು ಏಕೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ತಿಳಿದಿಲ್ಲ' ಎಂದು ಹೇಳಿದ್ದಾರೆ.
2 ಹಾಗೂ 3ನೇ ಮಹಡಿಯಲ್ಲಿ ಬೆಂಕಿ ಕಾಣಿಸಕೊಂಡಿದ್ದನ್ನು ತಕ್ಷಣವೇ ಗಮನಿಸಿ, ನಂದಿಸಲು ಕ್ರಮ ಕೈಗೊಳ್ಳಲಾಗಿತ್ತು. 4, 5 ಹಾಗೂ 6ನೇ ಮಹಡಿಗೆ ಯಾವುದೇ ಹಾನಿ ಉಂಟು ಮಾಡದೇ, 7 ರಿಂದ 9ನೇ ಮಹಡಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು? ಈ ಕುರಿತು ವಿಸ್ತೃತವಾಗಿ ತನಿಖೆ ನಡೆಸಲಾಗುವುದು' ಎಂದು ಸಚಿವರು ತಿಳಿಸಿದ್ದಾರೆ.
ಆಗ್ನಿಶಾಮಕ ಸಿಬ್ಬಂದಿ 24*7 ಶ್ರಮವಹಿಸಿ, ಗುರುವಾರ ಬೆಳಿಗ್ಗೆ ಹೊತ್ತಿಗೆ ಬೆಂಕಿ ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲಾಡಳಿತವು ಇಲ್ಲಿನ ಅಲಿಪೋರ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಿಸ್ತೃತ ತನಿಖೆ ಆರಂಭಗೊಂಡಿದೆ.

