ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ವಿದ್ಯಾರ್ಥಿ ಸಮಾವೇಶಗಳನ್ನು ನಡೆಸಲಿದೆ.
ಮೊದಲ ವಿದ್ಯಾರ್ಥಿ ಸಮಾವೇಶವು ಜೂನ್ 17 ರಂದು ದೇಶದ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರಗಳ ಕೇಂದ್ರವಾದ ರಾಜಸ್ಥಾನದ ಕೋಟಾದಿಂದ ಆರಂಭವಾಗಲಿದೆ.
ಜೂನ್ 11 ರಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಪ್ರಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಅಭಿಯಾನವು ನೀಟ್ ವಿಕೇಂದ್ರೀಕರಣ, ಪರೀಕ್ಷಾ ಶುಲ್ಕ ರದ್ದತಿ, ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಡಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಅಭಿಯಾನವು ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು, ನಿರುದ್ಯೋಗ ಮತ್ತು ಮೋದಿ ಸರ್ಕಾರದಿಂದ ಯುವಕರಿಗೆ ಆಗುತ್ತಿರುವ ವ್ಯವಸ್ಥಿತ ದ್ರೋಹದ ಮೇಲೆ ಕೇಂದ್ರೀಕರಿಸಲಿದೆ ಎಂದರು.
"ಪ್ರಶ್ನೆ ಪತ್ರಿಕೆ ಸೋರಿಕೆ, ಹೆಚ್ಚುತ್ತಿರುವ ಪರೀಕ್ಷಾ ವೆಚ್ಚಗಳು ಹಾಗೂ ನ್ಯಾಯಯುತ, ಪಾರದರ್ಶಕ ನೇಮಕಾತಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಅಭಿಯಾನವು ಜನರಿಗೆ ಜಾಗೃತಿ ಮೂಡಿಸಲಿದೆ" ಎಂದು ಅವರು ಹೇಳಿದರು.
ಅಭಿಯಾನದ ಭಾಗವಾಗಿ ಓSUI, ಯುವ ಕಾಂಗ್ರೆಸ್ ಮತ್ತು ದೇಶಾದ್ಯಂತ ರಾಜ್ಯ, ಜಿಲ್ಲಾ ಮತ್ತು ಸ್ಥಳೀಯ ಘಟಕಗಳ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ರಾಹುಲ್ ಗಾಂಧಿ ಕರೆ ನೀಡಿರುವುದಾಗಿ ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿ ಸಮಾವೇಶಗಳು ಜುಲೈ 10 ರಂದು ಅಲಹಾಬಾದ್, ಜುಲೈ 11 ರಂದು ಪಾಟ್ನಾ ಮತ್ತು ಜುಲೈ 14 ರಂದು ದಿಲ್ಲಿಯಲ್ಲಿ ನಡೆಯಲಿವೆ.

