ಲಾತೂರ್: ಮಹಾರಾಷ್ಟ್ರದ ಲಾತೂರ್‌ನ ನಿರ್ಗತಿಕರ ಶಿಬಿರದ 10 ವರ್ಷದ ಬಾಲಕನೊಬ್ಬ ಶಾಲೆಯ ಮೊದಲ ದಿನವೇ ಬರೋಬ್ಬರಿ 16 ಕಿಲೋಮೀಟರ್ ಓಡಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾನೆ.
ಮನುಸ್ ಪ್ರತಿಷ್ಠಾನದ ವತಿಯಿಂದ ನಿರ್ಗತಿಕ ಮಕ್ಕಳಿಗಾಗಿ ನಡೆಸಲಾಗುತ್ತಿರುವ 'ಮಾಝಾ ಘರ್' ಆಶ್ರಯ ತಾಣದಲ್ಲಿರುವ 4ನೇ ತರಗತಿ ವಿದ್ಯಾರ್ಥಿ ಅರವಿಂದ್ ರಾಥೋಡ್ ಈ ಸಾಹಸ ಮಾಡಿದ ಬಾಲಕ.
ಈತ ಸೋಮವಾರ (ಜೂನ್ 15) ಆಶ್ರಮದಿಂದ ಹಳೆಯ ಔಸಾ ರಸ್ತೆಯಲ್ಲಿರುವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಶಾಲೆಗೆ ಇರುವ 16 ಕಿ.ಮೀ ದೂರವನ್ನು ಓಡುವ ಮೂಲಕವೇ ತಲುಪಿದ್ದಾನೆ. ಬಾಲಕನ ಈ ಅಪ್ರತಿಮ ಸಾಧನೆಯನ್ನು ಆಶ್ರಮದ ಪದಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
'ಇದು ಆತನ ಶಿಸ್ತು, ಪರಿಶ್ರಮ ಮತ್ತು ದೈಹಿಕ ದೃಢತೆಗೆ ಸಾಕ್ಷಿಯಾಗಿದೆ. ಮೊಬೈಲ್ ಸ್ಕ್ರೀನ್‌ಗಳಿಗೆ ಅಂಟಿಕೊಳ್ಳುವ ಇಂದಿನ ದಿನಗಳಲ್ಲಿ, ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂಬುದಕ್ಕೆ ಈ ಬಾಲಕನೇ ಪ್ರೇರಣೆ' ಎಂದು ಆಶ್ರಮದ ಪ್ರತಿನಿಧಿಗಳು ಹೆಮ್ಮೆಯಿಂದ ಹೇಳಿದ್ದಾರೆ.
ಆಶ್ರಮದ ಮೂಲಗಳ ಪ್ರಕಾರ, ಶಾಲೆಯ ಮೊದಲ ದಿನವೇ ಇಷ್ಟು ದೂರವನ್ನು ಓಡಬೇಕೆಂಬುದು ಅರವಿಂದ್‌ನ ವೈಯಕ್ತಿಕ ಸವಾಲಾಗಿತ್ತು. ಇದು ಆತನ ಅಚಲ ನಿರ್ಧಾರ ಮತ್ತು ಕಲಿಯಬೇಕೆಂಬ ಉತ್ಸಾಹವನ್ನು ತೋರಿಸುತ್ತದೆ. ಬಾಲಕನ ಈ ಸಾಧನೆಗೆ ಸ್ಥಳೀಯರು ಹಾಗೂ ಸಂಘಟನೆಯ ಬೆಂಬಲಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

