ಬೈರೂತ್: ಅಮೆರಿಕ-ಇರಾನ್ ನಡುವೆ ಯುದ್ಧ ಅಂತ್ಯಕ್ಕೆ ಒಪ್ಪಂದವು ಅಂತಿಮ ಘಟ್ಟ ತಲುಪಿರುವ ಬೆನ್ನಲ್ಲೇ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ದಾಳಿ ತೀವ್ರಗೊಳಿಸಿದ್ದು, ರಾತ್ರಿ ಇಡೀ ಈ ಪ್ರದೇಶದಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ತೀವ್ರ ಸಂಘರ್ಷ ನಡೆದಿದೆ ಎಂದು ವರದಿಯಾಗಿದೆ.
ಈ ಸಂಘರ್ಷದಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿರುವುದಾಗಿ ಲೆಬನಾನ್ ಸರ್ಕಾರದ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೆಬನಾನ್ ಸೇರಿ ಎಲ್ಲ ಕಡೆ ಮಿಲಿಟರಿ ಕಾರ್ಯಾಚರಣೆ ಸ್ಥಗಿತ, ಲೆಬನಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಒಪ್ಪಂದವು ಕರೆ ನೀಡುತ್ತದೆ. ಆದರೆ, ಇಸ್ರೇಲ್ ನಡೆಸುತ್ತಿರುವ ದಾಳಿಯು ಈ ಪ್ರಕ್ರಿಯೆಗೆ ಹಿನ್ನಡೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ವರ್ಷದ ಕೊನೆಯಲ್ಲಿ ಚುನಾವಣೆ ಎದುರಿಸುತ್ತಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಿಜ್ಬುಲ್ಲಾ ವಿರುದ್ಧದ ಯುದ್ದದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಹಿಜ್ಬುಲ್ಲಾ ನಿಗ್ರಹದವರೆಗೂ ದಾಳಿ ನಿಲ್ಲುವುದಿಲ್ಲ ಎಂದಿದ್ದಾರೆ.
ಇಸ್ರೇಲ್‌ನ ಈ ಯುದ್ಧದಿಂದಾಗಿ ಇರಾನ್ ವಿರುದ್ಧದ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇಂದು ನಡೆಯಬೇಕಿದ್ದ ಮಾತುಕತೆ ವಿಳಂಬವಾಗಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಗುರುವಾರ ಸ್ವಿಟ್ಜರ್‌ಲ್ಯಾಂಡ್‌ಗೆ ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ. ಅಮೆರಿಕವು ಇದಕ್ಕೆ ಲಾಜಿಸ್ಟಿಕ್ಸ್ ಸಮಸ್ಯೆ ಕಾರಣ ಎಂದು ಹೇಳಿದೆ. ಆದರೆ, ಇಸ್ರೇಲ್, ಲೆಬನಾನ್‌ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಇರಾನ್ ತನ್ನ ನಿಯೋಗವನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಕಳುಹಿಸುವುದನ್ನು ವಿಳಂಬ ಮಾಡುತ್ತಿದೆ ಎಂದು ಪ್ಯಾನ್ ಅರಬ್ ಸ್ಯಾಟಲೈಟ್ ಚಾನೆಲ್ ಅಲ್ ಮಯದೀನ್ ವರದಿ ಮಾಡಿದ ಬಳಿಕ ಈ ಬೆಳವಣಿಗೆ ಆಗಿದೆ.
ಬುಧವಾರ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಭೋಜನ ಕೂಟದ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು ತಕ್ಷಣದಿಂದಲೇ ಜಾರಿಗೆ ಬಂದಿತ್ತು.
ನಂತರ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದ ವ್ಯಾನ್ಸ್, ವಿಶ್ವದಲ್ಲಿಇಸ್ರೇಲ್ ಬಗ್ಗೆ ಸಹಾನುಭೂತಿ ಹೊಂದಿರುವ ಏಕೈಕ ರಾಷ್ಟ್ರದ ಮುಖ್ಯಸ್ಥ ಟ್ರಂಪ್ ಎಂದು ಹೇಳಿದ್ದರು.

