ನವದೆಹಲಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಸರ್ಕಾರವು 2025-26ರ ಆರ್ಥಿಕ ವರ್ಷದಲ್ಲಿ ವಾಯುವ್ಯ ಪ್ರಾಂತ್ಯದಾದ್ಯಂತ ಹಿಂದೂಗಳ ಕಲ್ಯಾಣ ಮತ್ತು ಪುನರ್ವಸತಿಗಾಗಿ 184.5 ಮಿಲಿಯನ್ ಪಿಕೆಆರ್(18.4 ಕೋಟಿ ಪಾಕಿಸ್ತಾನದ ರೂಪಾಯಿ) ಹಣವನ್ನು ಮಂಜೂರು ಮಾಡಿದೆ.
ಗುರುವಾರ ಇಲ್ಲಿನ ಖೈಬರ್ ಪಖ್ತುಂಖ್ವಾದ ಅಲ್ಪಸಮಖ್ಯಾತ ವಿಭಾಗದ ಅಧ್ಯಕ್ಷ ವಜೀರ್ ಜಾದಾ ಅವರನ್ನು ಭೇಟಿಯಾಗಿದ್ದ ಹಿಂದೂ ಸಭಾ ಅಧ್ಯಕ್ಷ ರಾಜೇಶ್ ಕುಮಾರ್ ನೇತೃತ್ವದ ನಿಯೋಗವು ಹಿಂದೂಗಳ ಕಲ್ಯಾಣದ ಬಗ್ಗೆ ಚರ್ಚಿಸಿದರು.
ಈ ಪ್ರಾಂತ್ಯದಲ್ಲಿನ ಹಿಂದೂ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಮೇಲೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ನಡುವೆಯೇ ಈ ಪ್ರಾಂತ್ಯದಾದ್ಯಂತ ದೇವಾಲಯಗಳು, ಸ್ಮಶಾನಗಳು ಮತ್ತು ಇತರ ಸಮುದಾಯ-ಸಂಬಂಧಿತ ಸೌಲಭ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆ ಸೇರಿದಂತೆ ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ 184.5 ಮಿಲಿಯನ್ ಪಿಕೆಆರ್ ಹಣವನ್ನು ಮಂಜೂರು ಮಾಡಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಲವು ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಅಧ್ಯಕ್ಷರು ಹೇಳಿದ್ದಾರೆ.
ಹಿಂದೂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ನಿಯೋಗದ ಸದಸ್ಯರು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಕಳವಳಗಳನ್ನು ಪರಿಹರಿಸುವ ಮತ್ತು ಸಮುದಾಯ ಸೇವೆಗಳು ಹಾಗೂ ಮೂಲಸೌಕರ್ಯ ಸುಧಾರಿಸುವ ಗುರಿಯನ್ನು ಹೊಂದಿರುವ ಹಲವು ಪ್ರಸ್ತಾಪಗಳನ್ನು ಅವರು ಸರ್ಕಾರದ ಮುಂದೆ ಮಂಡಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಧಾರ್ಮಿಕ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅದ್ನಾನ್ ಖಾದ್ರಿ ಅವರೊಂದಿಗೆ ಈ ವಿಷಯಗಳನ್ನು ಚರ್ಚಿಸಿ ಅವುಗಳ ಸರಿಯಾದ ಪರಿಗಣನೆ ಮತ್ತು ಸಕಾಲಿಕ ಪರಿಹಾರವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಲಾಗಿದೆ.

