ತ್ರಿಶೂರ್: ತ್ರಿಶೂರ್ ಜಿಲ್ಲೆಯ ಮನೆಯೊಂದರ ಆವರಣದಲ್ಲಿ ಬರೋಬ್ಬರಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಪೂಂಕುನ್ನಂನ ಎಂ.ಜಿ ನಗರದ ಕಾರ್ತಿಕ್ ಎಂಬುವವರ ಮನೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮನೆಯ ಮಾಲೀಕ ಕಾರ್ತಿಕ್ ಅವರ ಸಹೋದರ ಮನೆಯ ಪಕ್ಕದಲ್ಲಿರುವ ಕಾಲುವೆಯ ಬಳಿ ಮೊದಲು ಎರಡು ಸಣ್ಣ ಹಾವಿನ ಮರಿಗಳನ್ನು ಗಮನಿಸಿದ್ದರು. ತಕ್ಷಣವೇ ಹುಡುಕಾಟ ನಡೆಸಿದಾಗ ಮನೆಯ ಸುತ್ತಮುತ್ತ ಹಾಗೂ ಆವರಣದಲ್ಲಿ ಮತ್ತಷ್ಟು ಮರಿಗಳು ಇರುವುದು ಕಂಡುಬಂದಿದೆ. ಮೊದಲ ದಿನವೇ ಸುಮಾರು 8 ಮರಿಗಳನ್ನು ರಕ್ಷಿಸಲಾಗಿತ್ತು, ಆದರೆ ಎರಡು ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.
ಮರುದಿನ ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಹಾವು ರಕ್ಷಕರ ತಂಡ ಮತ್ತೆ ಕಾರ್ಯಾಚರಣೆ ನಡೆಸಿದಾಗ ಇನ್ನೂ 10 ಮರಿಗಳು ಪತ್ತೆಯಾಗಿವೆ. ಆಶ್ಚರ್ಯಕರವೆಂದರೆ, ಇದರಲ್ಲಿ ಕೆಲವು ಮರಿಗಳು ಮನೆಯ ಮುಂದೆ ನಿಲ್ಲಿಸಲಾಗಿದ್ದ ಸ್ಕೂಟರ್ನ ಒಳಭಾಗದಲ್ಲಿ ಅಡಗಿ ಕುಳಿತಿದ್ದವು. ಒಟ್ಟಾರೆಯಾಗಿ 24 ಗಂಟೆಗಳಲ್ಲಿ ಸುಮಾರು 18 ಹೆಬ್ಬಾವಿನ ಮರಿಗಳನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ.
ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆಯ ಪಕ್ಕದ ಕಾಲುವೆಯ ಮೂಲಕ ದೊಡ್ಡ ಹೆಬ್ಬಾವೊಂದು ಮನೆಯ ತಳಪಾಯದ ಬಳಿ ಅಥವಾ ಕಾಂಪೌಂಡ್ ಗೋಡೆಯ ಸಂದಿಗಳಲ್ಲಿ ಮೊಟ್ಟೆಯಿಟ್ಟಿರಬಹುದು. ಆ ಮೊಟ್ಟೆಗಳು ಈಗ ಒಡೆದು ಮರಿಗಳು ಹೊರಬಂದಿವೆ ಎಂದು ಶಂಕಿಸಲಾಗಿದೆ.
ಹಿಡಿಯಲಾದ ಎಲ್ಲಾ ಹೆಬ್ಬಾವಿನ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಆದರೆ, ಮನೆಯ ಆವರಣದಲ್ಲಿ ಅಥವಾ ಕಾಂಪೌಂಡ್ ಗೋಡೆಯ ಒಳಗೆ ಇನ್ನೂ ಹೆಚ್ಚಿನ ಹಾವುಗಳು ಅಥವಾ ತಾಯಿ ಹೆಬ್ಬಾವು ಇರುವ ಸಾಧ್ಯತೆ ಇರುವುದರಿಂದ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾಂಪೌಂಡ್ ಗೋಡೆಯ ಕೆಲವು ಭಾಗಗಳನ್ನು ಒಡೆದು ತಪಾಸಣೆ ನಡೆಸಲು ಮನೆಯವರು ಸಿದ್ಧತೆ ನಡೆಸಿದ್ದಾರೆ. ಮನೆಯಲ್ಲಿ ವೃದ್ಧರು ಮತ್ತು ಮಕ್ಕಳ ಇರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ.

