ಈ ಸಾಧನೆಯು ಹಿಂದಿನ ಹಣಕಾಸು ವರ್ಷದ 1.54 ಲ.ಕೋ.ರೂ.ಗಳ ಉತ್ಪಾದನೆಗೆ ಹೋಲಿಸಿದರೆ ಶೇ.15.6 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ರಕ್ಷಣಾ ಉತ್ಪಾದನೆಯಲ್ಲಿ ಈ ಗಮನಾರ್ಹ ಬೆಳವಣಿಗೆಯು ರಕ್ಷಣಾ ಉತ್ಪಾದನಾ ಇಲಾಖೆ ಮತ್ತು ಇತರ ಎಲ್ಲಾ ಪಾಲುದಾರರ ಸಾಮೂಹಿಕ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬೆಳವಣಿಗೆಯು ದೇಶದ ವಿಸ್ತರಿಸುತ್ತಿರುವ ರಕ್ಷಣಾ ಕೈಗಾರಿಕಾ ಬುನಾದಿಯ ಸ್ಪಷ್ಟ ಸೂಚಕವಾಗಿದೆ. ನಿರಂತರ ನೀತಿ ಬೆಂಬಲ, ಹಲವಾರು ಹೊಸ ಉಪಕ್ರಮಗಳು, ಖಾಸಗಿ ವಲಯದ ಹೆಚ್ಚಿದ ಭಾಗವಹಿಸುವಿಕೆ ಮತ್ತು ಬೆಳೆಯುತ್ತಿರುವ ರಫ್ತು ಸಾಮರ್ಥ್ಯಗಳೊಂದಿಗೆ ರಕ್ಷಣಾ ಉತ್ಪಾದನಾ ವಲಯವು ಮುಂಬರುವ ವರ್ಷಗಳಲ್ಲಿ ನಿರಂತರ ವೇಗವನ್ನು ಪಡೆಯಲು ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಣಾ ಉತ್ಪಾದನೆಯಲ್ಲಿನ ಬೆಳವಣಿಗೆಯು ಅದ್ಭುತವಾಗಿದೆ. ರಕ್ಷಣಾ ಉತ್ಪಾದನೆ 84,643 ಕೋ.ರೂ.ಗಳಾಗಿದ್ದ 2020-21 ರ ಅವಧಿಗೆ ಹೋಲಿಸಿದರೆ 2025-26ರಲ್ಲಿಯ ಉತ್ಪಾದನೆಯು ಶೇ. 110 ರಷ್ಟು ಹೆಚ್ಚಳವಾಗಿದೆ. ದೇಶೀಯ ರಕ್ಷಣಾ ಉತ್ಪಾದನೆಯು 2013-14 ರಲ್ಲಿದ್ದ 43,746 ಕೋ.ರೂ.ಗಳಿಂದ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
2025-26ರಲ್ಲಿ ರಕ್ಷಣಾ ಪಿಎಸ್‌ಯುಗಳು ಮತ್ತು ಇತರ ಪಿಎಸ್‌ಯುಗಳ ಪಾಲು ಒಟ್ಟು ಉತ್ಪಾದನೆಯ ಸುಮಾರು ಶೇ.76ರಷ್ಟಿದ್ದರೆ, 2024-25 ರಲ್ಲಿ ಶೇ.22ರಷ್ಟಿದ್ದ
ಖಾಸಗಿ ವಲಯದ ಪಾಲು ಶೇ.24ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದ ಪಾಲು 2025-26ರಲ್ಲಿ ಸುಮಾರು 42,000 ಕೋ.ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು,ಇದು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಅದರ ವಿಸ್ತರಿಸುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ಸೇರಿಸಿದೆ.
ರಕ್ಷಣಾ ಉತ್ಪಾದನೆಯಲ್ಲಿನ ಬೆಳವಣಿಗೆಯು 2025-26ರಲ್ಲಿ ದಾಖಲೆಯ 38,424 ಕೋ.ರೂ.ಮೌಲ್ಯದ ರಕ್ಷಣಾ ರಫ್ತು ಸಾಧಿಸಲು ಅತ್ಯಂತ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಸಾಧನೆಯು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ 'ಆತ್ಮನಿರ್ಭರ ಭಾರತ' ಉಪಕ್ರಮದಡಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಸರಕಾರದ ಹೆಚ್ಚುತ್ತಿರುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

