ನವದೆಹಲಿ: ನೀಟ್ ಯುಜಿ 2026ರ ಪರೀಕ್ಷೆ ರದ್ದತಿ ಮತ್ತು ಮರುಪರೀಕ್ಷೆಯ ನಡುವಿನ 37 ದಿನಗಳ ಅವಧಿಯಲ್ಲಿ ದೇಶದಾದ್ಯಂತ 12 ಆಕಾಂಕ್ಷಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 12ರಂದು ನೀಟ್ ಯುಜಿ 2026ರ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಜೂನ್ 21ರಂದು ಮರುಪರೀಕ್ಷೆ ನಡೆಯಲಿದೆ.
ಆತ್ಮಹತ್ಯೆ ಮಾಡಿಕೊಂಡ 12 ನೀಟ್ ಆಕಾಂಕ್ಷಿಗಳು ಜೂನ್ 21 ರಂದು ಮರುಪರೀಕ್ಷೆ ಬರೆಯಬೇಕಿತ್ತು. ಈ 12 ಪ್ರಕರಣಗಳಲ್ಲಿ ಐವರು ಆಕಾಂಕ್ಷಿಗಳ ಮೃತದೇಹದ ಬಳಿ ಯಾವುದೇ ಡೆತ್ ನೋಟು ಪತ್ತೆಯಾಗಿರಲಿಲ್ಲ.
ಮೇ 3ರಂದು ನೀಟ್ ಪರೀಕ್ಷೆ ಬರೆದ ನಂತರ ರಾಜಸ್ಥಾನದ ಜುನ್ಜುನು ಜಿಲ್ಲೆಯ ಹಳ್ಳಿಯೊಂದರ 22 ವರ್ಷದ ದಲಿತ ಯುವಕ ತನ್ನ ತಂದೆ ಜೊತೆ ಮಾತನಾಡುತ್ತಾ, ಪರೀಕ್ಷೆ ಎಷ್ಟು ಚೆನ್ನಾಗಿತ್ತೆಂದರೆ, "ದೇವರು ಕೂಡ ನನ್ನನ್ನು ಅರ್ಹತೆ ಪಡೆಯದಂತೆ ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದನು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮರುಪರೀಕ್ಷೆ ಘೋಷಿಸಲಾಗಿತ್ತು. ಇದರಿಂದ ನೊಂದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದನು.
ಗುಜರಾತ್‌ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅಹ್ಮದಾಬಾದ್ ನಗರದಲ್ಲಿ 17 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಕಳೆದ ಬುಧವಾರ ತಡರಾತ್ರಿ ತಾನು ವಾಸವಾಗಿದ್ದ 14 ಮಹಡಿಗಳ ವಸತಿ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯಲ್ಲಿ ಇತ್ತೀಚೆಗೆ 19 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಮತ್ತೆ ಪರೀಕ್ಷೆಗೆ ಹಾಜರಾಗಬೇಕಾಗಿ ಬಂದಿದ್ದರಿಂದ ದುಃಖಿತರಾಗಿದ್ದರು ಎನ್ನಲಾಗಿದೆ.
2026ರ ನೀಟ್ ಪರೀಕ್ಷೆ ರದ್ಧತಿ ಬಳಿಕ ಆಕಾಂಕ್ಷಿಗಳಲ್ಲಿ ಒತ್ತಡ ಹೆಚ್ಚಳವಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ರಾಜಸ್ಥಾನ, ಗೋವಾ, ಮಧ್ಯಪ್ರದೇಶ, ಉತ್ತರಾಖಂಡ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಹೊಸದಿಲ್ಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಒಟ್ಟು 12 ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

