ಕೀವ್: ರಾಜಧಾನಿ ಕೀವ್ ಹಾಗೂ ಇತರ ನಗರಗಳ ಮೇಲೆ ರಷ್ಯಾ ರಾತ್ರಿಯಿಡೀ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 21 ನಾಗರಿಕರು ಮೃತರಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ಕೆಲವರು ವಸತಿ ಸಮುಚ್ಚಯಗಳ ಅವಶೇಷಗಳಡಿ ಸಿಲುಕಿದ್ದಾರೆ.
ಕೇಂದ್ರ ಉಕ್ರೇನ್ ನಗರವಾದ ಡಿನಿಪ್ರೊದಲ್ಲಿ ಅವಶೇಷಗಳ ಅಡಿಯಿಂದ ಎಂಟು ವರ್ಷದ ಮಗು, ತಾಯಿ ಹಾಗೂ ಮೂರು ವರ್ಷದ ಮಗುವೊಂದರ ದೇಹವನ್ನು ಸಿಬ್ಬಂದಿ ಹೊರತೆಗೆದಿದ್ದಾರೆ' ಎಂದು ಅವರು ಮಾಹಿತಿ ನಿಡಿದ್ದಾರೆ.
'ಕ್ಷಿಪಣಿಗಳು ಮತ್ತು ಖಂಡಾಂತರ ಕ್ಷಿಪಣಿ ದಾಳಿಯಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳದಿದ್ದರೆ ರಷ್ಯಾ ದಾಳಿಯು ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶ ಇದಾಗಿದೆ' ಎಂದು ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಂದ ಹೆಚ್ಚಿನ ಬೆಂಬಲವನ್ನು ಕೋರಿದ್ದಾರೆ.
'73 ಕ್ಷಿಪಣಿಗಳು ಹಾಗೂ 656 ಡ್ರೋನ್‌ಗಳನ್ನು ರಷ್ಯಾ ಹಾರಿಸಿದ್ದು, ಅದರಲ್ಲಿ 40 ಕ್ಷಿಪಣಿಗಳು ಹಾಗೂ 602 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ' ಎಂದು ಉಕ್ರೇನ್ ವಾಯು ರಕ್ಷಣಾ ಪಡೆ ಮಾಹಿತಿ ನೀಡಿದೆ.

