ಪೆಶಾವರ: ಗುಪ್ತಚರ ಮಾಹಿತಿ ಆಧರಿಸಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸರಣಿ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ ಸೇನೆ, ಮೂರು ದಿನಗಳಿಂದ 21 ಉಗ್ರರನ್ನು ಹತ್ಯೆಗೈದಿದೆ. ಈ ಬಗ್ಗೆ ಸೇನೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ಹತ್ಯೆಯಾದ ಉಗ್ರರು ಫಿತ್ನಾ-ಅಲ್-ಖ್ವಾರಿಜಿ ಸಂಘಟನೆಗೆ ಸೇರಿದವರು.
ಭದ್ರತಾ ಸಿಬ್ಬಂದಿ, ನಾಗರಿಕರ ಹತ್ಯೆ ಸೇರಿದಂತೆ ಹಲವು ಭಯೋತ್ಪಾದಕ ಚಟುವಟಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಇವರೆಲ್ಲ ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದ್ದರು ಎಂದು ತಿಳಿಸಲಾಗಿದೆ.
ಫಿತ್ನಾ-ಅಲ್-ಖ್ವಾರಿಜಿ ಎಂಬುದು ನಿಷೇಧಿತ ಸಂಘಟನೆ ತೆಹರೀಕ್-ಇ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಮತ್ತೊಂದು ಹೆಸರಾಗಿದೆ.
'ನಿಕರ ಮತ್ತು ಕೌಶಲ್ಯ ಕಾರ್ಯಾಚರಣೆ ವೇಳೆ ವಾರದಿಂದ ಈಚೆಗೆ ಒಟ್ಟು 48 ಉಗ್ರರನ್ನು ಹತ್ಯೆ ಮಾಡಲಾಗಿದೆ. ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಭಯೋತ್ಪಾದನೆ ನಿರ್ಮೂಲನೆ ಕಾರ್ಯಾಚರಣೆ ಮುಂದುವರಿಯಲಿದೆ' ಎಂದೂ ಸೇನೆ ಹೇಳಿದೆ.
ಡಟ್ಟ ಖೆಲ್ ಪ್ರದೇಶದಲ್ಲಿ ಮೇ ತಿಂಗಳ ಕೊನೆಯಲ್ಲಿ 11 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಉಗ್ರರು ಮಿರಾನ್‌ಶಾ ಪ್ರದೇಶದಲ್ಲಿ ನಡೆಸಲು ಯೋಜಿಸಿದ್ದ ಆತ್ಮಾಹುತಿ ಬಾಂಬ್ ದಾಳಿ ಯತ್ನವನ್ನು ಜೂನ್ ಮೊದಲ ವಾರದಲ್ಲಿ ವಿಫಲಗೊಳಿಸಿದ್ದ ಸೇನೆ, ನಿಷೇಧಾಜ್ಞೆ ಜಾರಿಗೊಳಿಸಿತ್ತು.

