ನವದೆಹಲಿ: 22ರಿಂದ 30ಶೇಕಡಾ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ.
ಬುಧವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, 22ರಿಂದ 30% ಎಥೆನಾಲ್ ಅಂಶ ಹೊಂದಿರುವ ಪೆಟ್ರೋಲ್‌ಗೆ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಹಾಗೂ ಬಳಕೆದಾರ ರಾಷ್ಟ್ರವಾಗಿರುವ ಭಾರತವು, ಇಂಧನ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಕೈಗೊಳ್ಳಲಾಗಿದೆ.
ಅಬಕಾರಿ ಸುಂಕವು ಇಂಧನ ಸೇರಿದಂತೆ ಕೆಲವು ಸರಕುಗಳ ಮೇಲೆ ಸರಕಾರ ವಿಧಿಸುವ ತೆರಿಗೆಯಾಗಿದೆ. ಈಗ 22ರಿಂದ 30 ಶೇಕಡಾ ಎಥೆನಾಲ್ ಮಿಶ್ರಿತ ಪೆಟ್ರೋಲ್ ಗೆ ಈ ತೆರಿಗೆ ಅನ್ವಯಿಸುವುದಿಲ್ಲ. ಇದರಿಂದ ಇಂತಹ ಇಂಧನದ ಉತ್ಪಾದನೆ ಮತ್ತು ಪೂರೈಕೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.
ಆದರೆ, ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಸಾಮಾನ್ಯ ಪೆಟ್ರೋಲ್‌ಗೆ ಸಂಬಂಧಿಸಿದಂತೆ ಯಾವುದೇ ತಕ್ಷಣದ ಬದಲಾವಣೆಗಳನ್ನು ಸರಕಾರ ಘೋಷಿಸಿಲ್ಲ. ಹೀಗಾಗಿ ಗ್ರಾಹಕರ ಮೇಲೆ ಈ ನಿರ್ಧಾರದ ಪರಿಣಾಮ ತಕ್ಷಣ ಗೋಚರಿಸುವ ಸಾಧ್ಯತೆ ಕಡಿಮೆ.
ಭಾರತ ತನ್ನ ಇಂಧನ ಅಗತ್ಯಗಳ ಬಹುಪಾಲನ್ನು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೂಲಕ ಪೂರೈಸುತ್ತಿದೆ. ಕಬ್ಬು ಹಾಗೂ ಧಾನ್ಯಗಳಂತಹ ಕೃಷಿ ಉತ್ಪನ್ನಗಳಿಂದ ದೇಶದಲ್ಲೇ ಉತ್ಪಾದಿಸುವ ಎಥೆನಾಲ್ ಬಳಕೆಯನ್ನು ಹೆಚ್ಚಿಸುವ ಮೂಲಕ ಆಮದು ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.
ಎಥೆನಾಲ್ ಮಿಶ್ರಣ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ದೊರೆತಿದೆ. ಜೊತೆಗೆ, ತೈಲ ಆಮದು ವೆಚ್ಚ ತಗ್ಗಿಸುವುದು ಮತ್ತು ಇಂಧನ ಸುರಕ್ಷತೆ ಹೆಚ್ಚಿಸುವ ಗುರಿಗೂ ಇದು ನೆರವಾಗಿದೆ.
ಹೆಚ್ಚಿನ ಎಥೆನಾಲ್ ಅಂಶ ಹೊಂದಿರುವ ಪೆಟ್ರೋಲ್ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಸರಕಾರ ಮುಂದಾಗಿದ್ದು, ಇತ್ತೀಚಿನ ತೆರಿಗೆ ವಿನಾಯಿತಿ ಅದಕ್ಕೆ ಪೂರಕ ಕ್ರಮವಾಗಿದೆ. ಭಾರತದ ಸಾರಿಗೆ ಇಂಧನದಲ್ಲಿ ದೇಶೀಯವಾಗಿ ಉತ್ಪಾದಿಸುವ ಎಥೆನಾಲ್‌ನ ಪಾತ್ರವನ್ನು ಹೆಚ್ಚಿಸುವ ದೀರ್ಘಾವಧಿಯ ಯೋಜನೆಯ ಭಾಗವಾಗಿ ಈ ನಿರ್ಧಾರವನ್ನು ಪರಿಗಣಿಸಲಾಗಿದೆ.

