ನವದೆಹಲಿ: 2026-27ನೇ ಸಾಲಿನ ಬಜೆಟ್ ಸಂದರ್ಭದಲ್ಲಿ ಭಾರೀ ರಿಯಾಯಿತಿ ಪಡೆದಿದ್ದ ಕ್ಯಾನ್ಸರ್ ಔಷಧಗಳ ಬೆಲೆಯನ್ನು ಈಗ ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಅನುಮತಿ ನೀಡಿದೆ ಎಂದು ವರದಿಯಾಗಿದೆ.
ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ.
ಪ್ಲಾಟಿನಂ ಪೂರೈಕೆಯಲ್ಲೂ ಕೊರತೆಯಾದ ಕಾರಣ, ಪ್ಲಾಟಿನಂ ಆಧಾರಿತ ಕ್ಯಾನ್ಸರ್ ಔಷಧಗಳ ಬೆಲೆ ಹೆಚ್ಚಿಸಲು ಎನ್‌ಪಿಪಿಎ ಅನುಮತಿ ನೀಡಿದೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲಾಟಿನಂ ಆಧಾರಿತ ಕ್ಯಾನ್ಸರ್ ಔಷಧಿಗಳಾದ ಸಿಸ್ಪ್ಲಾಟಿನ್ ಮತ್ತು ಕಾರ್ಬೋಪ್ಲಾಟಿನ್ ಕೊರತೆ ಎದುರಾಗಿದೆ.
ಕ್ಯಾನ್ಸರ್ ಔಷಧಗಳ ಬೆಲೆ ಏರಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಪ್ಲಾಟಿನಂನಂತಹ ಕಚ್ಚಾ ವಸ್ತುಗಳ ದರ ದುಪ್ಪಟ್ಟಾಗಿದೆ.
ಯಾವ ಔಷಧಗಳ ಬೆಲೆ ಹೆಚ್ಚಾಗಲಿದೆ?
ಸಿಸ್ಪ್ಲಾಟಿನ್ ಮತ್ತು ಕಾರ್ಬೋಪ್ಲಾಟಿನ್ ಎಂಬ ಪ್ಲಾಟಿನಂ ಆಧಾರಿತ ಕಿಮೊಥೆರಪಿ ಔಷಧಗಳ ಬೆಲೆಯನ್ನು ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಓPPಂ) ಅನುಮತಿ ನೀಡಿದೆ.
ಈ ಔಷಧಗಳನ್ನು ಯಾವ ಕಾಯಿಲೆಗಳಿಗೆ ಬಳಸುತ್ತಾರೆ?
ಅಂಡಾಶಯ, ಗರ್ಭಕಂಠ, ಸ್ತನ, ಶ್ವಾಸಕೋಶ, ಬಾಯಿ, ತಲೆ, ಕುತ್ತಿಗೆ, ಮೂತ್ರಕೋಶ ಮತ್ತು ವೃಷಣ ಕ್ಯಾನ್ಸರ್‌ಗಳ ಮೊದಲ ಹಂತದ ಚಿಕಿತ್ಸೆಯಲ್ಲಿ ಈ ಔಷಧಗಳು ಮುಖ್ಯವಾಗಿವೆ.
ಭಾರತದಲ್ಲಿ ಕ್ಯಾನ್ಸರ್ ಸಮಸ್ಯೆಯ ಗಂಭೀರತೆ ಎಷ್ಟಿದೆ?
ಭಾರತದಲ್ಲಿ ಪ್ರತಿ ವರ್ಷ ಸುಮಾರು 15 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಮತ್ತು ಐಸಿಎಂಆರ್ ಪ್ರಕಾರ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ.
ಸರಬರಾಜಿನ ಮೇಲೆ ಆಗಿರುವ ಪರಿಣಾಮವೇನು?
ಕಚ್ಚಾ ವಸ್ತುಗಳ ಲಭ್ಯತೆಯ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಅನೇಕ ಔಷಧ ತಯಾರಕರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧಗಳ ಕೊರತೆ ಎದುರಾಗಿದೆ.
'ಸರ್ಕಾರ ಔಷಧದ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ. ಎನ್‌ಪಿಪಿಎ, ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವತಂತ್ರ ನಿಯಂತ್ರಕ ಸಂಸ್ಥೆಯಾಗಿರುವುದರಿಂದ ಅಂತಿಮ ನಿರ್ಧಾರವನ್ನು ಅದು ತೆಗೆದುಕೊಳ್ಳುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರಿ ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಪೂರೈಕೆಯಲ್ಲಿನ ನಿರ್ಬಂಧ, ಬೇಡಿಕೆಯಲ್ಲಿನ ಏರಿಕೆಯಿಂದಾಗಿ ಪ್ಲಾಟಿನಂ ದರ ಹಿಂದಿಗಿಂತ ದುಪ್ಟಟ್ಟಾಗಿದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ.
ಪ್ಲಾಟಿನಂ ಆಧಾರಿತ ಕಚ್ಚಾ ವಸ್ತುಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಔಷಧ ತಯಾರಕರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರು.
ಸಿಪ್ಲಾ ಸೇರಿದಂತೆ ಹಲವು ಜೆನರಿಕ್ ಔಷಧ ತಯಾರಕರು ಈ ಪ್ಲಾಟಿನಂ ಆಧಾರಿತ ಕಿಮೊಥೆರಪಿ ಔಷಧಗಳನ್ನು ತಯಾರಿಸುತ್ತಾರೆ. ಸಿಸ್ಪ್ಲಾಟಿನ್ ಮತ್ತು ಕಾರ್ಬೋಪ್ಲಾಟಿನ್ ಔಷಧಗಳನ್ನು ಅಂಡಾಶಯ, ಗರ್ಭಕಂಠ, ಸ್ತನ, ಶ್ವಾಸಕೋಶ, ಬಾಯಿ, ತಲೆ, ಕುತ್ತಿಗೆ, ಮೂತ್ರಕೋಶ ಮತ್ತು ವೃಷಣ ಕ್ಯಾನ್ಸರ್‌ಗಳ ಚಿಕಿತ್ಸೆಗಾಗಿ ಮೊದಲ ಹಂತದಲ್ಲಿ ಬಳಸುವ ಕಿಮೊಥೆರಪಿ ಔಷಧಗಳಾಗಿವೆ
ಈ ಬಗ್ಗೆ ಔಷಧ ಇಲಾಖೆ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ವರದಿಯಾಗಿದೆ.
ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಏರಿಕೆ
ಐಸಿಎಂಆರ್ ಪ್ರಕಾರ ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 15 ಲಕ್ಷ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.
ಮಾಹಿತಿ: ಬ್ಯುಸಿನೆಸ್ ಸ್ಟಾಂಡರ್ಡ್, ಐಸಿಎಂಆರ್, ರಾಯಿಟರ್ಸ್, ಮನಿ ಕಂಟ್ರೋಲ್

