ನವದೆಹಲಿ: ರಾಜಕೀಯಕ್ಕೆ ಮಮತಾ ಬ್ಯಾನರ್ಜಿ ಮೂಲಕ ಎಂಟ್ರಿ ಕೊಟ್ಟ ಟಾಲಿವುಡ್ ನಟಿ ಶತಾಬ್ದಿ ರಾಯ್, ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಗುಂಪು ಎನ್‌ಡಿಎಗೆ ಬೆಂಬಲ ವ್ಯಕ್ತಪಡಿಸಿ, ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ನಿರ್ಧಾರವನ್ನು ರಾಜಕೀಯವಾಗಿ ಬೆಂಬಲಿಸುವುದಾಗಿ ರಾಯ್ ಹೇಳಿದ್ದಾರೆ.
ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, 'ರಾಜಕೀಯವಾಗಿ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನನಗೆ ಅನಿಸುತ್ತದೆ... ಆದರೆ ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ನಾನು ಮಾಡುತ್ತಿರುವುದು ತಪ್ಪು... ಅದನ್ನು ಹೊರತುಪಡಿಸಿದರೆ ಇದು ಸರಿಯಾದ ನಿರ್ಧಾರ' ಎಂದು ರಾಯ್ ಹೇಳಿದರು.
ಮಮತಾ ಬ್ಯಾನರ್ಜಿಯವರಿಗೆ ಅವರು ಏನು ಹೇಳಲು ಬಯಸುತ್ತಾರೆ ಎಂದು ಕೇಳಿದಾಗ, 'ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ದೀದಿ!' ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷವಾದ ಟಿಎಂಸಿ, ಬಿಜೆಪಿ ವಿರುದ್ಧ ಹೀನಾಯ ಸೋಲಿನ ನಂತರ ಆಂತರಿಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಈಗ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅವರ ಶಾಸಕರು ಮತ್ತು ಸಂಸದರಲ್ಲಿ ಭಿನ್ನಮತ ಹೆಚ್ಚಾಗುತ್ತಿದೆ.
ರಾಜ್ಯ ವಿಧಾನಸಭೆಯಲ್ಲಿ, ಸುಮಾರು 60 ಶಾಸಕರು ಮೊದಲ ಬಾರಿಗೆ ಶಾಸಕಿಯಾಗಿರುವ ಋತಬ್ರತ ಬ್ಯಾನರ್ಜಿಯನ್ನು ಬೆಂಬಲಿಸುತ್ತಾರೆ. ಅವರು ತಮ್ಮ ಬಣವೇ 'ನಿಜವಾದ ತೃಣಮೂಲ ಕಾಂಗ್ರೆಸ್'ಅನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೊಂಡಿದ್ದರೆ. ಸಂಸತ್ತಿನಲ್ಲಿ, 20 ಟಿಎಂಸಿಯ ಬಂಡಾಯ ಸಂಸದರು ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಹಿರಿಯ ನಾಯಕರು ಪಕ್ಷವನ್ನು ತೊರೆಯುತ್ತಿದ್ದಂತೆ ಬಂಡಾಯ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಟಿಎಂಸಿ ಸಂಸದ ಸುಖೇಂದು ಶೇಖರ್ ರೇ ಪಕ್ಷ ಮತ್ತು ತಮ್ಮ ಸ್ಥಾನ ಎರಡಕ್ಕೂ ರಾಜೀನಾಮೆ ನೀಡಿದ್ದಾರೆ. ಸುಷ್ಮಿತಾ ದೇವ್ ಕೂಡ ಪಕ್ಷ ಮತ್ತು ಅವರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರವು ಪಕ್ಷವನ್ನು ಜನರಿಂದ ದೂರವಿಟ್ಟಿದೆ. ಮಮತಾ ಬ್ಯಾನರ್ಜಿ ಅದನ್ನು ಪರಿಹರಿಸಲು ನಿರಾಕರಿಸಿದ್ದರಿಂದಲೇ ನಾಯಕರು ಪಕ್ಷದಿಂದ ದೂರವಾದರು. ಚುನಾವಣಾ ಫಲಿತಾಂಶಗಳ ಕುರಿತು ಚರ್ಚಿಸಲು ಬ್ಯಾನರ್ಜಿ ಪಕ್ಷದ ನಾಯಕರ ಸಭೆ ಕರೆದಿದ್ದರು. ಸೋಲಿನ ವ್ಯಾಪ್ತಿ ಮತ್ತು ಅದರ ಕಾರಣಗಳು ಎಲ್ಲರಿಗೂ ಸ್ಪಷ್ಟವಾಗಿದ್ದರೂ, ಬ್ಯಾನರ್ಜಿ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಯಾರೂ ಅವರನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಶತಾಬ್ದಿ ರಾಯ್ ತಿಳಿಸಿದರು.
'ಯಾರೂ ತಮ್ಮ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗಲಿಲ್ಲ. 'ನಾವು ಬಿಜೆಪಿ ವಿರುದ್ಧ ಸೋತಿಲ್ಲ. ಅವರು ನನಗೆ ಬೆದರಿಕೆ ಹಾಕುತ್ತಿದ್ದಾರೆ' ಎಂದು ಅವರು ಹೇಳಿದರು. 'ನಿಮಗೆ ಏನಾದರೂ ಸಮಸ್ಯೆ ಇದ್ದರೆ, ದೂರು ಇದ್ದರೆ, ಅದನ್ನು ಬರೆದಿಡಿ' ಎಂದು ಅವರು ನನಗೆ ಹೇಳಿದರು. ನಮಗೆ ಬರೆಯಲು ಸಮಯವಿಲ್ಲ. ನೀವು (ಬ್ಯಾನರ್ಜಿ) ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕಿತ್ತು' ಎಂದು ತಿಳಿಸಿದರು.
ಪಕ್ಷದ ಮುಖ್ಯಸ್ಥರು ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಯಸುತ್ತೀರಿ ಎಂದು ಕೇಳಿದಾಗ, 'ನಾವು ಏಕೆ ಸೋತಿದ್ದೇವೆ ಎಂಬುದನ್ನು ಮೊದಲು ವಿಶ್ಲೇಷಿಸಿ. ಇದು I-Pಂಅ ಸಮಸ್ಯೆ. ಇದು ಅಭಿಷೇಕ್ ಸಮಸ್ಯೆ. ಇದು ನಮ್ಮ ಭ್ರಷ್ಟಾಚಾರದ ಸಮಸ್ಯೆ. ಆದರೆ, ಅವರು ಆ ವಿಷಯವನ್ನು ತಿಳಿಸುತ್ತಿಲ್ಲ. ಆ ದಿನ ನಮಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಆ ದಿನ, ಆ ಸಮಯದಲ್ಲಿ, ನಾನು ನಿರ್ಧರಿಸಿದೆ. ಪಕ್ಷವು ಯಾವುದೇ ಬದಲಾವಣೆಗಳು, ಯಾವುದೇ ಹೊಸ ಪರಿಕಲ್ಪನೆ ಅಥವಾ ಯಾವುದೇ ಪುನರ್ ರಚನೆಯನ್ನು ಬಯಸುವುದಿಲ್ಲ... ಅದು ಹಾಗೆಯೇ ಮುಂದುವರಿಯುತ್ತದೆ' ಎಂದರು.
ಟಿಎಂಸಿ ಕಾಂಗ್ರೆಸ್ ಜೊತೆ ವಿಲೀನಗೊಳ್ಳುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, 'ಇನ್ನು ಮುಂದೆ ಯಾವುದೇ ಆಯ್ಕೆ ಉಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಟಿಎಂಸಿಯು ಕಾಂಗ್ರೆಸ್ ಜೊತೆ ಸೇರಿಕೊಂಡರೆ, ಅದು ಉತ್ತಮ ಅವಕಾಶ. ಆದರೆ, ಅದರಲ್ಲೂ ಒಂದು ಸಮಸ್ಯೆ ಇದೆ. ವಿಲೀನವಾದರೂ ಮಮತಾ ಬ್ಯಾನರ್ಜಿ ಅವರೇ ಮುಖ್ಯಸ್ಥರಾಗಿರುತ್ತಾರೆ. ಅವರು ಯಾವುದೇ ಪಕ್ಷ ಅಥವಾ ಯಾವುದೇ ಸಮಿತಿ ಅಥವಾ ಯಾವುದರಲ್ಲೂ ಆ ಸ್ಥಾನವನ್ನು ಬಿಟ್ಟುಕೊಡುವವರಲ್ಲ' ಎಂದರು.
'ನೀವು ನನ್ನನ್ನು ಕೇಳಿದರೆ, ನನಗೆ ಮಮತಾ ಬಗ್ಗೆ ಬೇಸರವಾಗುತ್ತದೆ. ನಾನು ಭಾವನಾತ್ಮಕವಾಗಿ ಅವರೊಂದಿಗೆ ನಂಟು ಹೊಂದಿದ್ದೇನೆ... ನಾನು ಅವರೊಂದಿಗಿಲ್ಲ ಎಂದು ನಂಬುವುದು ಕಷ್ಟ... ಈ ಬಾರಿ ಮಮತಾ ಬ್ಯಾನರ್ಜಿ ಕೆಟ್ಟ ಸ್ಥಿತಿಯಲ್ಲಿದ್ದಾರೆ' ಎಂದು ಅವರು ಹೇಳಿದರು.

