ಲಕ್ನೊ: ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷದಿಂದ ಹೊರಬರಲು ಸಿದ್ಧವಾಗಿದ್ದು, ವಿರೋಧ ಪಕ್ಷಗಳ ಪಾಳೆಯವನ್ನು ವಿಭಜಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ ಎಂದು ಬುಧವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಸಮಾಜವಾದಿ ಪಕ್ಷ ಇನ್ನೆಂದೂ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವುದಿಲ್ಲ ಎಂದು ಹೇಳಿದರು.
"ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷದಿಂದ ಹೊರಬರಲು ಸಿದ್ಧರಾಗಿದ್ದಾರೆ. ಆದರೆ, ನಾವು ಅವರನ್ನು ಒಡೆಯುತ್ತಿಲ್ಲ. ಅವರೇ ಪಕ್ಷವನ್ನು ವಿಭಜಿಸಲಿದ್ದಾರೆ ಎಂಬುದು ನಮಗೆ ತಿಳಿದಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಸಮಾಜವಾದಿ ಪಕ್ಷದಲ್ಲಿ ಪ್ರಮುಖ ರಾಜಕೀಯ ಮರುಹೊಂದಾಣಿಕೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಉತ್ತರ ಪ್ರದೇಶ ಸಚಿವ ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿಯ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಹೇಳಿಕೆ ನೀಡಿದ್ದರಿಂದ ತೀವ್ರಗೊಂಡಿರುವ ರಾಜಕೀಯ ಊಹಾಪೋಹಗಳ ನಡುವೆಯೇ ಕೇಶವ್ ಪ್ರಸಾದ್ ಮೌರ್ಯರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಕೇಶವ್ ಪ್ರಸಾದ್ ಮೌರ್ಯರ ಪ್ರತಿಪಾದನೆಯನ್ನು ಗುರುವಾರ ಸಮರ್ಥಿಸಿದ ರಾಜ್ ಭರ್, "ಸಮಾಜವಾದಿ ಪಕ್ಷದಲ್ಲಿ ವಿಭಜನೆ ಅನಿವಾರ್ಯವಾಗಿದೆ ಹಾಗೂ ಅಖಿಲೇಶ್ ಯಾದವ್ ತಮ್ಮ ಸಂಸದರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ" ಎಂದು ಹೇಳಿದ್ದಾರೆ.

