ಕೋಲ್ಕತ್ತ: ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪಶ್ಚಿಮ ಬಂಗಾಳದ ಮಾಜಿ ಸಚಿವ ಅರೂಪ್ ಬಿಸ್ವಾಸ್ ಅವರು, ಟಿಎಂಸಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವಂತೆ HDFC Bank ಗೆ ಪತ್ರ ಬರೆದಿದ್ದಾರೆ.
ಅರೂಪ್ ಬಿಸ್ವಾಸ್ HDFC Bank ಗೆ ಕಳುಹಿಸಿದ ಪತ್ರದಲ್ಲಿ, ಪಕ್ಷದೊಳಗಿನ ಬಂಡಾಯ ಗುಂಪು ತಾವೇ ಪಕ್ಷದ ಅಧಿಕೃತ ಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಎಂದು ಹೇಳಿಕೊಳ್ಳುತ್ತಿವೆ. ಇದರಿಂದ ಟಿಎಂಸಿಯ ಬ್ಯಾಂಕ್ ಖಾತೆ ನಿರ್ವಹಿಸಲು ಯಾರಿಗೆ ಅಧಿಕಾರ ಇದೆ ಎಂಬ ಬಗ್ಗೆ ಅನಿಶ್ಚಿತತೆ ಉಂಟಾಗಿದೆ ಎಂದು ಹೇಳಿದ್ದಾರೆ.
ಟಿಎಂಸಿಯ ಬಂಡಾಯ ಶಾಸಕ ರಿತುಬ್ರತ ಬ್ಯಾನರ್ಜಿಯನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ನೇಮಕ ಮಾಡಿದ ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿರುವ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಟಿಎಂಸಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತರೆಂದು ಪರಿಗಣಿಸಲ್ಪಟ್ಟ ಬಿಸ್ವಾಸ್ ಅವರು ವಿಧಾನಸಭಾ ಚುನಾವಣೆವರೆಗೆ ಪಕ್ಷದ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಟೋಲಿಗಂಜ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಾಪಿಯ ಅಧಿಕಾರಿ ವಿರುದ್ಧ ಸೋಲನುಭವಿಸಿದ್ದರು. ಆ ಬಳಿಕ ಸುಭಾಷಿಸ್ ಚಕ್ರವರ್ತಿ ಅವರನ್ನು ಕೋಶಾಧಿಕಾರಿಯಾಗಿ ನೇಮಿಸಲಾಗಿತ್ತು.
ಬ್ಯಾಂಕ್‌ಗೆ ಬರೆದ ಪತ್ರದಲ್ಲಿ, ಅನಧಿಕೃತ ವ್ಯಕ್ತಿಗಳು ಸಹಿ ಮಾಡಿದ ಚೆಕ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಬ್ಯಾಂಕ್ ಖಾತೆಗಳ ನಿರ್ವಹಣೆ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ನಡುವೆ ಬಂಡಾಯ ಬಣದೊಂದಿಗೆ ಗುರುತಿಸಿಕೊಂಡಿರುವ ಟಿಎಂಸಿ ಶಾಸಕ ಕನೈಲಾಲ್ ಅಗರ್ವಾಲ್ ಅವರು ಪ್ರತಿಕ್ರಿಯಿಸಿದ್ದು, "ಪಕ್ಷದ ಖಜಾಂಚಿಯಾಗಿರುವ ಅರೂಪ್ ಬಿಸ್ವಾಸ್ ಅವರು ಪಕ್ಷದ ಹಣ ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಭಾವಿಸಿದರೆ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗೆ ಪತ್ರ ಬರೆಯುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.

