ಹಲವು ಪಕ್ಷಗಳು ಹೋಳಾಗುತ್ತಿವೆ. ಆ ಪಕ್ಷಗಳಿಂದ ಹೊರಬಿದ್ದ ಸಂಸದರು ಆಡಳಿತಾರೂಢ ಎನ್‌ಡಿಎ ಕಡೆಗೆ ವಾಲುತ್ತಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಆಪರೇಷನ್ ಅಗತ್ಯವಿತ್ತೇ ಎಂಬ ಪ್ರಶ್ನೆ ರಾಜಕೀಯ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಸಂಸದರ, ಅಂದರೆ 362 ಸಂಸದರ ಬೆಂಬಲ ಅಗತ್ಯವಿದೆ.
ಇದಕ್ಕಾಗಿಯೇ ಈಗ ಪಕ್ಷಾಂತರ ಪರ್ವ ಗರಿಗೆದರಿದೆ. ಆದರೆ, 362 ಸಂಸದರ ಬೆಂಬಲ ಕ್ರೋಡೀಕರಿಸುವುದು ಸುಲಭದ ಮಾತೇನಲ್ಲ. ಕ್ಷೇತ್ರ ಮರುವಿಂಗಡಣೆಯ ಮಸೂದೆ ಇಷ್ಟೊಂದು ಮಹತ್ವ ಪಡೆದುಕೊಂಡಿರುವುದೇಕೆ ಮತ್ತು ಈ ನಿಟ್ಟಿನಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದರ ವಿವರ ಇಲ್ಲಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು 2026ರ ಏಪ್ರಿಲ್ 16ರಿಂದ 18ರ ಅವಧಿಯಲ್ಲಿ ಲೋಕಸಭೆಯಲ್ಲಿ 3 ವಿಧೇಯಕಗಳನ್ನು ಮಂಡಿಸಿತು. 2029ರ ಚುನಾವಣೆಯ ಮುನ್ನ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಕಾಯ್ದೆಯನ್ನು ಜಾರಿಗೆ ತರಲು ಈ ಮೂರೂ ವಿಧೇಯಕಗಳು ಅಂಗೀಕಾರವಾಗುವುದು ಅತ್ಯಗತ್ಯ ಎಂದು ವಾದಿಸಲಾಯಿತು. ಇದರಲ್ಲಿ ಒಂದು ಸಂವಿಧಾನ ತಿದ್ದುಪಡಿ ವಿಧೇಯಕವೂ ಇತ್ತು. ಈ ವಿಧೇಯಕದಲ್ಲಿ ಲೋಕಸಭೆಯ ಗರಿಷ್ಠ ಸ್ಥಾನಗಳನ್ನು 550ರಿಂದ 850ಕ್ಕೆ ಹೆಚ್ಚಿಸುವ ಮತ್ತು ಸಂವಿಧಾನದ ಆರ್ಟಿಕಲ್ 81 ಮತ್ತು 82ರಲ್ಲಿ ಬದಲಾವಣೆಗಳನ್ನು ಮಾಡುವ ನಿಬಂಧನೆಗಳಿದ್ದವು.
ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲು ಸಂಸತ್ತಿನ ಉಭಯ ಸದನಗಳಲ್ಲಿ ವಿಶೇಷ ಬಹುಮತದ ಅಗತ್ಯವಿರುತ್ತದೆ. ಅಂದರೆ, ಮತದಾನದ ಸಮಯದಲ್ಲಿ ಸದನದ ಅರ್ಧಕ್ಕಿಂತ ಹೆಚ್ಚು ಸದಸ್ಯರು ಹಾಜರಿರಬೇಕು ಮತ್ತು ಹಾಜರಿರುವ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸಂಸದರು ಇದರ ಪರವಾಗಿ ಮತ ಚಲಾಯಿಸಬೇಕು.
ಒಂದು ವೇಳೆ ಲೋಕಸಭೆಯ ಎಲ್ಲ 543 ಸಂಸದರು ಹಾಜರಿದ್ದು, ಮಸೂದೆ ಮೇಲಿನ ಮತದಾನದಲ್ಲಿ ಭಾಗವಹಿಸಿದರೆ, ಬಿಲ್ ಪಾಸ್ ಆಗಲು ಮೂರನೇ ಎರಡರಷ್ಟು ಅಂದರೆ 362 ಸಂಸದರ ಬೆಂಬಲ ಅಗತ್ಯವಿರುತ್ತದೆ. ಏಪ್ರಿಲ್‌ನಲ್ಲಿ ನಡೆದ ಮತದಾನದ ಅವಧಿಯಲ್ಲಿ ಲೋಕಸಭೆಯಲ್ಲಿ 528 ಸಂಸದರು ಹಾಜರಿದ್ದರು. ಮೂರನೇ ಎರಡರಷ್ಟು ಲೆಕ್ಕಾಚಾರದ ಪ್ರಕಾರ, ಮಸೂದೆ ಅಂಗೀಕಾರಗೊಳ್ಳಲು 352 ಮತಗಳ ಅಗತ್ಯವಿತ್ತು. ಮತದಾನ ನಡೆದಾಗ, ಬಿಲ್ ಪರವಾಗಿ 298 ಮತಗಳು ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಇದರಿಂದಾಗಿ ಸಂವಿಧಾನ (131ನೇ ತಿದ್ದುಪಡಿ) ವಿಧೇಯಕವು 54 ಮತಗಳ ಕೊರತೆಯಿಂದಾಗಿ ಬಿದ್ದುಹೋಯಿತು. ಆದ್ದರಿಂದಲೇ, ಟಿಎಂಸಿ, ಶಿವಸೇನೆ, ಆಪ್ ಸೇರಿದಂತೆ ಹಲವು ಪಕ್ಷಗಳ ಸಂಸದರ ಬೆಂಬಲ ಪಡೆಯಲು ಮುಂದಾಗಿರುವ ಮೋದಿ ಸರ್ಕಾರ 362 ಸಂಸದರ ಬೆಂಬಲ ಪಡೆಯುವಲ್ಲಿ ಸಫಲವಾಗುವುದೇ ಎಂಬುದು ಕುತೂಹಲ ಮೂಡಿಸಿದೆ.
ಪಕ್ಷಾಂತರ ಪರ್ವ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಜೂನ್ 14ರಂದು ಅನಾಮಧೇಯ ಪಕ್ಷವಾದ ಎನ್‌ಸಿಪಿಐ ಜೊತೆ ವಿಲೀನಗೊಂಡರು. ಈಗ ಶಿವಸೇನೆಯ (ಉದ್ಧವ್ ಬಣ) 9 ಸಂಸದರ ಪೈಕಿ 6 ಲೋಕಸಭಾ ಸದಸ್ಯರು ಬಂಡಾಯವೆದ್ದಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್ 24ರಂದು ಆಮ್ ಆದ್ಮಿ ಪಕ್ಷದ (ಎಎಪಿ) 10 ಮೆಲ್ಮನೆ (ರಾಜ್ಯಸಭಾ) ಸಂಸದರ ಪೈಕಿ 7 ಸಂಸದರು ಬಂಡಾಯ ಸಾರಿದರು. ಈ ಎಲ್ಲ ಬಂಡಾಯ ಸಂಸದರು ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟವನ್ನು ಸೇರುತ್ತಿದ್ದಾರೆ. ಸಮಾಜವಾದಿ ಪಕ್ಷದಲ್ಲಿ ಕೂಡ ಒಡಕು ಕಾಣಿಸಿಕೊಂಡಿದ್ದು, ಆ ಪಕ್ಷದ ಹಲವು ಸಂಸದರು ಕೂಡ ಎನ್‌ಡಿಎ ಪಾಳಯಕ್ಕೆ ಸೇರುವ ಸಾಧ್ಯತೆಗಳಿವೆ.
ಮತ್ತೊಮ್ಮೆ ಪರೀಕ್ಷೆ
ಮೂಲಗಳ ಪ್ರಕಾರ, ಲೋಕಸಭೆ ಸೀಟುಗಳನ್ನು ಹೆಚ್ಚಿಸುವ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಮತ್ತೊಮ್ಮೆ ತರಲು ಬಯಸಿರುವ ಸರ್ಕಾರ, ಇದಕ್ಕಾಗಿಯೇ ಸಂಸದರ ಬೆಂಬಲದ ಸಂಖ್ಯೆಯನ್ನು ಹೆಚ್ಚಿಸುವ ಕಸರತ್ತು ನಡೆಸುತ್ತಿದೆ.
ಹೀಗಿದೆ ಮೈತ್ರಿಕೂಟದ ಸಂಖ್ಯಾಬಲ
ಲೋಕಸಭೆಯಲ್ಲಿ: ಎನ್‌ಡಿಎ ಜೊತೆಗೆ 318 ಸಂಸದರಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿಯ 16, ನಿತೀಶ್ ಕುಮಾರ್ ಅವರ ಜೆಡಿಯುನ 12, ಶಿವಸೇನೆಯ (ಶಿಂಧೆ ಬಣ) 7, ಎಲ್‌ಜೆಪಿಯ (ರಾಮ್‌ವಿಲಾಸ್ ಬಣ) 5 ಮತ್ತು ಇತರ ಪಕ್ಷಗಳ 12 ಸಂಸದರಿದ್ದಾರೆ. ಈ ಒಟ್ಟು ಸಂಖ್ಯೆ ಬಹುಮತಕ್ಕಿಂತ (272) 20 ಹೆಚ್ಚಾಗಿದ್ದು, ಅಂದರೆ 292 ಆಗಿತ್ತು. ಜೂನ್ 14ರಂದು ಟಿಎಂಸಿ ನಾಯಕಿ ಕಾಕಲಿ ಘೋಷ್ ದಸ್ತಿದಾರ್ ಸೇರಿ 20 ಲೋಕಸಭಾ ಸಂಸದರು ಎನ್‌ಡಿಎ ಬೆಂಬಲಿತ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ (ಎನ್‌ಸಿಪಿ)ಗೆ ಸೇರಿದಾಗ, ಲೋಕಸಭೆಯಲ್ಲಿ ಎನ್‌ಡಿಎ ಬಲ 292 ರಿಂದ 312ಕ್ಕೆ ಏರಿತು. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ಶಿವಸೇನೆಯ 9ರ ಪೈಕಿ 6 ಲೋಕಸಭಾ ಸದಸ್ಯರು ಕೂಡ ಎನ್‌ಡಿಎ ಮೈತ್ರಿಕೂಟದ ಶಿವಸೇನೆ (ಶಿಂಧೆ ಬಣ) ಸೇರಲಿದ್ದಾರೆ. ಇವರು ಸೇರಿದರೆ ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯೆ 318ಕ್ಕೆ ತಲುಪುತ್ತದೆ.
ರಾಜ್ಯಸಭೆಯಲ್ಲಿ: ರಾಜ್ಯಸಭೆಯ ಒಟ್ಟು 244 ಸ್ಥಾನಗಳಲ್ಲಿ ಎನ್‌ಡಿಎ ಆರಂಭದಲ್ಲಿ 138 ಸಂಸದರನ್ನು ಹೊಂದಿತ್ತು. ಏಪ್ರಿಲ್ 24ರಂದು ಆಮ್ ಆದ್ಮಿ (ಎಎಪಿ) ಪಕ್ಷದ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಯಾದರು. ಇದರಿಂದ ಬಿಜೆಪಿಯ ರಾಜ್ಯಸಭಾ ಸದಸ್ಯರ ಸಂಖ್ಯೆ 106ರಿಂದ 113ಕ್ಕೆ ಮತ್ತು ಎನ್‌ಡಿಎ ಒಟ್ಟು ಬಲ 145ಕ್ಕೆ ಏರಿತು. ಜೂನ್‌ನಲ್ಲಿ ನಡೆದ ರಾಜ್ಯಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಹೆಚ್ಚುವರಿ ಸ್ಥಾನಗಳನ್ನು ಗೆದ್ದಿದ್ದರಿಂದ ಎನ್‌ಡಿಎ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಟಿಎಂಸಿಯ 3 ರಾಜ್ಯಸಭಾ ಸಂಸದರಾದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಈ ಸೀಟುಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆಯಿದ್ದು, ಆಗ ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯೆ 154ಕ್ಕೆ ಏರಬಹುದು.
ಮೇಲ್ಮನೆ ಲೆಕ್ಕಾಚಾರ
ರಾಜ್ಯಸಭೆಯಲ್ಲಿ ಬಿಜೆಪಿ ಸದ್ಯಕ್ಕೆ ಎನ್‌ಡಿಎ ಅಥವಾ ಐಎನ್‌ಡಿಐಎ (INDIA) ಒಕ್ಕೂಟದಲ್ಲಿಲ್ಲದ ವೈಎಸ್‌ಆರ್ ಕಾಂಗ್ರೆಸ್ (ನಾಲ್ವರು ಸಂಸದರು) ಮತ್ತು ಬಿಜು ಜನತಾ ದಳ (5 ಸಂಸದರು) ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಇವರ ಬೆಂಬಲ ಸಿಕ್ಕರೆ ರಾಜ್ಯಸಭೆಯ 10 ಸೀಟುಗಳ ಕೊರತೆ ಬಹುತೇಕ ನೀಗಬಹುದು.
ಹಲವು ಪಕ್ಷಗಳ ಮೇಲೆ ಕಣ್ಣು
ಸದ್ಯಕ್ಕೆ ಸರ್ಕಾರವು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ 44 ಸ್ಥಾನಗಳು ಮತ್ತು ರಾಜ್ಯಸಭೆಯಲ್ಲಿ 10 ಸ್ಥಾನಗಳ ದೂರದಲ್ಲಿದೆ. ಈ ಕೊರತೆಯನ್ನು ಕೆಲವು ಸಣ್ಣ ಪ್ರಾದೇಶಿಕ ಪಕ್ಷಗಳ ಮೂಲಕ ನೀಗಿಸಲು ಯೋಜನೆ ರೂಪಿಸಲಾಗಿದೆ. ಲೋಕಸಭೆಯಲ್ಲಿ ಎನ್‌ಡಿಎ ಕಣ್ಣು ಪ್ರಮುಖವಾಗಿ ಎರಡು ಪಕ್ಷಗಳ ಮೇಲಿದೆ. ಮೊದಲನೆಯದು ತಮಿಳುನಾಡಿನ ಡಿಎಂಕೆ (22 ಸಂಸದರು) ಮತ್ತು ಎರಡನೆಯದು ಜಾರ್ಖಂಡ್ ಮುಕ್ತಿ ಮೋರ್ಚಾ - ಜೆಎಂಎಂ (3 ಸಂಸದರು). ಜೆಎಂಎಂ ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿವೆ.
ಇನ್ನು ಡಿಎಂಕೆ ಸಂಸದರನ್ನು ಸೆಳೆಯುವ ಜವಾಬ್ದಾರಿಯನ್ನು ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರಿಗೆ ನೀಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಡಿಎಂಕೆ ಮತ್ತು ಜೆಎಂಎಂ ಸಂಸದರು ಸರ್ಕಾರವನ್ನು ಬೆಂಬಲಿಸಿದರೆ, ಎನ್‌ಡಿಎ ಸಂಖ್ಯಾಬಲ 343ಕ್ಕೆ ತಲುಪುತ್ತದೆ, ಇದು ಮೂರನೇ ಎರಡರಷ್ಟು ಬಹುಮತಕ್ಕಿಂತ ಕೇವಲ 19 ಸ್ಥಾನ ಕಡಿಮೆ. ಇದರ ಹೊರತಾಗಿ, ಮತದಾನದ ದಿನದಂದು ವಿರೋಧ ಪಕ್ಷದ ಸಂಸದರು ಗೈರುಹಾಜರಾದರೆ, ಒಟ್ಟು ಹಾಜರಾತಿ ಸಂಖ್ಯೆ ಕಡಿಮೆಯಾಗಿ ಮೂರನೇ ಎರಡರಷ್ಟು ಬಹುಮತದ ಅಗತ್ಯದ ಸಂಖ್ಯೆಯೂ ಕೆಳಗೆ ಇಳಿಯುತ್ತದೆ. ಇದು ಸರ್ಕಾರಕ್ಕೆ ಮಸೂದೆ ಅಂಗೀಕಾರ ಮಾಡಲು ಸುಲಭವಾಗುತ್ತದೆ.
ಕ್ಷೇತ್ರ ಮರುವಿಂಗಡಣೆ ಬಿಲ್ ಅಂಗೀಕಾರವಾದರೆ...
ಕ್ಷೇತ್ರ ಮರುವಿಂಗಡಣೆಯ ನಂತರ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ. ಸರ್ಕಾರ ತರಲು ಉದ್ದೇಶಿಸಿರುವ ಮಸೂದೆಯಲ್ಲಿ ಲೋಕಸಭೆ ಸ್ಥಾನಗಳ ಸಂಖ್ಯೆಯನ್ನು 550ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾಪವಿದೆ. ಗೃಹ ಸಚಿವ ಅಮಿತ್ ಷಾ ಇದರ ಸೂತ್ರವನ್ನು ವಿವರಿಸುತ್ತ, 'ಉದಾಹರಣೆಗೆ 100 ಸ್ಥಾನಗಳಿದ್ದು, ಅದರಲ್ಲಿ 33% ಮೀಸಲಾತಿ ನೀಡಬೇಕೆಂದಿದ್ದರೆ, ಅಲ್ಲಿ 50 ಸ್ಥಾನಗಳನ್ನು ಹೆಚ್ಚಿಸಲಾಗುತ್ತದೆ. ಆಗ ಒಟ್ಟು ಕ್ಷೇತ್ರಗಳ ಸಂಖ್ಯೆ 150 ಆಗುತ್ತದೆ. ಲೋಕಸಭೆಯಲ್ಲಿ ಈ ಅಂದಾಜು ಸಂಖ್ಯೆಯನ್ನು 850ಕ್ಕೆ ನಿಗದಿಪಡಿಸಲಾಗಿದೆ' ಎಂದಿದ್ದರು.
ಎಲ್ಲ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳು ಅನುಪಾತದ ಪ್ರಕಾರ ಹೆಚ್ಚಾಗುತ್ತವೆ ಎಂದು ಸರ್ಕಾರ ಹೇಳಿದೆ. ಅಂದರೆ ಪ್ರಸ್ತುತ 543 ಸ್ಥಾನಗಳ ಲೋಕಸಭೆಯಲ್ಲಿ ತಮಿಳುನಾಡಿಗೆ 7.18% ರಷ್ಟು (39 ಸೀಟುಗಳು) ಪಾಲಿದ್ದರೆ, 850 ಸೀಟುಗಳ ಲೋಕಸಭೆಯಲ್ಲೂ 7.18% ರಷ್ಟು ಅಂದರೆ 61 ಸೀಟುಗಳು ಸಿಗಲಿವೆ.
ದಕ್ಷಿಣ ಭಾರತದ ರಾಜ್ಯಗಳ ಆತಂಕ
ಕ್ಷೇತ್ರ ಮರುವಿಂಗಡಣೆ ಮಸೂದೆಯಲ್ಲಿ ಎಲ್ಲ ರಾಜ್ಯಗಳ ಸ್ಥಾನಗಳನ್ನು 'ಅನುಪಾತದ ಆಧಾರದ ಮೇಲೆ ಹೆಚ್ಚಿಸುವ' ಯಾವುದೇ ಖಾತರಿಯ ಕಾನೂನು ನಿಬಂಧನೆ ಇಲ್ಲ. ಸಂವಿಧಾನದ ಆರ್ಟಿಕಲ್ 81(2)(ಎ) ಪ್ರಕಾರ ಕ್ಷೇತ್ರಗಳು ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಹಂಚಿಕೆಯಾಗಬೇಕು. ಸರ್ಕಾರ 2011ರ ಜನಗಣತಿಯ ಆಧಾರದ ಮೇಲೆ ಇದನ್ನು ಜಾರಿಗೆ ತರಲು ಮುಂದಾದರೆ, ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ/ತೆಲಂಗಾಣ ರಾಜ್ಯಗಳಿಗೆ ಭಾರಿ ನಷ್ಟವಾಗಲಿದೆ.
ದೇಶದ ಪ್ರಮುಖ ನಿರ್ಧಾರಗಳಲ್ಲಿ ದಕ್ಷಿಣದ ರಾಜ್ಯಗಳ ಪ್ರಭಾವ ಕಡಿಮೆಯಾಗಲಿದೆ. ಇದಕ್ಕಾಗಿಯೇ 1976 ಮತ್ತು 2001ರಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಜನಸಂಖ್ಯೆಯ ವ್ಯತ್ಯಾಸದಿಂದಾಗಿ ಕ್ಷೇತ್ರ ಮರುವಿಂಗಡಣೆಯನ್ನು ಮುಂದೂಡಲಾಗಿತ್ತು. ಈ ಹೊಸ ನಿಯಮದಿಂದ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶದಂತಹ ಹಿಂದಿ ಭಾಷಿಕ ರಾಜ್ಯಗಳಿಗೆ ಹೆಚ್ಚಿನ ಕ್ಷೇತ್ರಗಳು ಸಿಗಲಿವೆ.

