ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ವಕೀಲೆ ಮತ್ತು ನಾಲ್ವರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ನೀಡಲು ಕೇಂದ್ರ ಸರಕಾರವು ಅನುಮೋದನೆ ನೀಡಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ನಡೆದ ನೇಮಕಾತಿಯ ಕುರಿತು ಕೇಂದ್ರ ಕಾನೂನು ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ರವರ ನೇತೃತ್ವದಲ್ಲಿ ಮೇ 22 ಮತ್ತು 27 ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಶೀಲ್ ನಾಗು, ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಶ್ರಿ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಸಂಜೀವ್ ಸಚ್ ದೇವ, ಜಮ್ಮು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಅರುಣ್ ಪಲ್ಲಿ ಹಾಗೂ ಸುಪ್ರಿಂಕೋರ್ಟ್ ಹಿರಿಯ ವಕೀಲೆ ವಿ ಮೋಹನ ಅವರನ್ನು ಸುಪ್ರಿಂಕೋರ್ಟ್ ನ್ಯಾಯಾಧೀಶರುಗಳಾಗಿ ನೇಮಿಸಲು ಅನುಮೋದಿಸಲಾಗಿದೆ.
ತಮಿಳುನಾಡು ಮೂಲದ ವಿ ಮೋಹನರವರು ಸುಪ್ರೀಂಕೋರ್ಟ್ ನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಲೇ ನ್ಯಾಯಾಧೀಶರಾಗಿ ಭಡ್ತಿಗೊಂಡ ಎರಡನೇ ಮಹಿಳೆಯಾಗಿದ್ದಾರೆ ಎಂಬುವುದು ವಿಶೇಷವಾಗಿದೆ. ಈ ಹಿಂದೆ ಜಸ್ಟೀಸ್ ಇಂದು ಮಲ್ಹೋತ್ರ ರವರು ಮೊದಲ ಬಾರಿಗೆ ನ್ಯಾಯಾಧೀಶರಾಗಿ ನೇರವಾಗಿ ಭಡ್ತಿಗೊಂಡಿದ್ದರು .
ಪ್ರಸ್ತುತ ಈ ನೇಮಕಾತಿಯ ನಂತರ ಸುಪ್ರಿಂಕೋರ್ಟ್ ನಲ್ಲಿ ನ್ಯಾಯಾಧೀಶರ ಸಂಖ್ಯೆಯು 37 ಆಗಲಿವೆ.

