ನವದೆಹಲಿ: ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಜೂನ್ 18ರಂದು ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಇನ್ಶೂರೆನ್ಸ್ ಎಂಬುದು ಕೇವಲ ವಿಮೆ ಮಾಡಿಸಿದ ಗ್ರಾಹಕ ಮತ್ತು ವಿಮಾ ಕಂಪನಿಯ ನಡುವಿನ ವೈಯಕ್ತಿಕ ಒಪ್ಪಂದವಾಗಿದ್ದು, ಅದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ಸಾಲ ನೀಡಿದ ಹಣಕಾಸು ಸಂಸ್ಥೆಗಳು (ಫೈನಾನ್ಸಿಯರ್) ನೇರವಾಗಿ ನಷ್ಟ ಪರಿಹಾರಕ್ಕೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ನ್ಯಾಯಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಕೇಸ್ ಹಾಕಿದ್ದ ವಿಮಾ ಕಂಪನಿ
ಬಾಕಿ ಸಾಲದ ಕಾರಣಕ್ಕಾಗಿ ವಾಹನ ಮಾಲೀಕರಿಂದ ಗಾಡಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಕೆ. ಪ್ರಕಾಶ್‌ಚಂದ್ ಎಂಬ ಫೈನಾನ್ಸಿಯರ್ ಸಲ್ಲಿಕೆ ಮಾಡಿದ್ದ ಮೇಲ್ಮನವಿಯನ್ನು ವಜಾಗೊಳಿಸುವಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಪ್ರಕರಣದ ವಿವರಗಳ ಪ್ರಕಾರ, ಸೋಮಶೇಖರ್ ಎಂಬುವವರು ಓರಿಯಂಟಲ್ ಇನ್ಶೂರೆನ್ಸ್ ಕಂಪನಿಯಿಂದ ತಮ್ಮ ವಾಹನಕ್ಕೆ ಸಮಗ್ರ ವಿಮೆ ಮಾಡಿಸಿದ್ದರು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಅವರು ಸಾಲದ ಕಂತುಗಳನ್ನು ಕಟ್ಟಲಾಗದೆ, 2003ರ ಡಿಸೆಂಬರ್ 13 ರಂದು ವಾಹನವನ್ನು ಸಾಲ ನೀಡಿದ್ದ ಪ್ರಕಾಶ್‌ಚಂದ್ ಅವರಿಗೆ ಒಪ್ಪಿಸಿದ್ದರು. ಇದಾಗಿ ಕೇವಲ ಎರಡೇ ದಿನಗಳಲ್ಲಿ ಅಂದರೆ ಡಿಸೆಂಬರ್ 15 ರಂದು ಆ ವಾಹನ ಕಳುವಾಗಿತ್ತು. ಈ ಹಿನ್ನೆಲೆಯಲ್ಲಿ ಫೈನಾನ್ಸಿಯರ್ ಪ್ರಕಾಶ್‌ಚಂದ್ ಪೊಲೀಸರಿಗೆ ದೂರು ನೀಡಿ, ಬಳಿಕ ವಿಮಾ ಕಂಪನಿಯಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯು ಈ ಕ್ಲೈಮ್ ಅನ್ನು ತಿರಸ್ಕರಿಸಿತ್ತು.
ಈ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಮಾ ಪಾಲಿಸಿಯು ಮೂಲ ವಾಹನ ಮಾಲೀಕ ಸೋಮಶೇಖರ್ ಹೆಸರಿನಲ್ಲಿ ಇತ್ತೇ ಹೊರತು ಫೈನಾನ್ಸಿಯರ್ ಹೆಸರಿನಲ್ಲಿ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಪಾಲಿಸಿಯಲ್ಲಿ ಹೈರ್-ಪರ್ಚೇಸ್ ಅಥವಾ ಹೈಪೋಥಿಕೇಶನ್ ಎಂದು ಫೈನಾನ್ಸಿಯರ್ ಪರವಾಗಿ ನಮೂದಾಗಿದ್ದರೂ, ಸಾಲದ ಒಪ್ಪಂದಕ್ಕೆ ವಿಮಾ ಕಂಪನಿಯು ಸಹಿ ಹಾಕಿರಲಿಲ್ಲ ಹಾಗೂ ಅದರ ಪ್ರತಿಯೂ ಕಂಪನಿಗೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೆ, ಗ್ರಾಹಕರು ವಾಹನವನ್ನು ತಮಗೆ ಒಪ್ಪಿಸಿದ್ದಾರೆ ಎಂಬುದಕ್ಕೆ ಪ್ರಕಾಶ್‌ಚಂದ್ ಯಾವುದೇ ಗಟ್ಟಿ ದಾಖಲೆ ನೀಡಿಲ್ಲ ಮತ್ತು ವಾಹನ ಕಳುವಾದ ನಿಖರ ವಿವರಗಳನ್ನು ಒದಗಿಸುವಲ್ಲಿಯೂ ವಿಫಲರಾಗಿದ್ದಾರೆ. ಇದಲ್ಲದೆ ವಿಮೆ ಮಾಡಿಸಿದ್ದ ಗ್ರಾಹಕ ಸೋಮಶೇಖರ್ ಸದ್ಯ ತಲೆಮರೆಸಿಕೊಂಡಿದ್ದು, ವಿಮಾ ಕಂಪನಿಗೆ ಯಾವುದೇ ಅಧಿಕೃತ ಮಾಹಿತಿ ತಲುಪಿಲ್ಲ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ವಾಹನವನ್ನು ಮಾಲೀಕರು ಫೈನಾನ್ಸಿಯರ್ ವಶಕ್ಕೆ ನೀಡಿದ್ದರೂ, ಕಾನೂನುಬದ್ಧವಾಗಿ ಪ್ರಕಾಶ್‌ಚಂದ್ ಅವರೇ ಆ ವಾಹನದ ಮಾಲೀಕರಾಗುವುದಿಲ್ಲ. ವಿಮಾ ಕಂಪನಿಗೂ ಮತ್ತು ಹಣಕಾಸು ನೆರವು ನೀಡಿದ ಪ್ರಕಾಶ್‌ಚಂದ್ ಅವರಿಗೂ ಯಾವುದೇ ನೇರ ಒಪ್ಪಂದ (ಪ್ರಿವಿಟಿ ಆಫ್ ಕಂಟ್ರಾಕ್ಟ್) ಇಲ್ಲದೇ ಇರುವುದರಿಂದ ನಷ್ಟ ತುಂಬಿಕೊಡುವಂತೆ ವಿಮಾ ಕಂಪನಿಗೆ ಒತ್ತಾಯಿಸುವ ಹಕ್ಕು ಅವರಿಗಿರುವುದಿಲ್ಲ ಎಂದು ಕೋರ್ಟ್ ಹೇಳಿದೆ. ಈ ಹಿಂದೆ ಮೈಸೂರಿನ ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗವು ಫೈನಾನ್ಸಿಯರ್ ಪರವಾಗಿ ತೀರ್ಪು ನೀಡಿದ್ದವು. ಆದರೆ 2015ರಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (NCDRC) ಈ ತೀರ್ಪುಗಳನ್ನು ರದ್ದುಗೊಳಿಸಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ರಾಷ್ಟ್ರೀಯ ಆಯೋಗದ ತೀರ್ಪನ್ನು ಎತ್ತಿಹಿಡಿಯುವ ಮೂಲಕ ವಿಮಾ ಒಪ್ಪಂದಗಳ ಕಾನೂನು ವ್ಯಾಪ್ತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

