ನವದೆಹಲಿ: ಶಿವಸೇನಾ ಉದ್ಧವ್ ಠಾಕ್ರೆ (ಯುಬಿಟಿ) ಬಣದಲ್ಲಿ ಬಂಡಾಯ ಎದ್ದಿರುವ ಆರು ಸಂಸದರು ಇಂದು (ಗುರುವಾರ) ನಡೆದ ಸಂಸದೀಯ ಪಕ್ಷದ ಸಭೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಶಿಂದೆ ನೇತೃತ್ವದ ಆಡಳಿತಾರೂಢ ಶಿವಸೇನಾದಲ್ಲಿ ವಿಲೀನಗೊಳ್ಳಲು ಶಿವಸೇನಾ ಯುಬಿಟಿ ಬಣದ 6ರಿಂದ 7 ಸಂಸದರು ಒಲವು ತೋರಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ.
'ಸಭೆಗೆ ಹಾಜರಾಗದ ಸಂಸದರಿಗೆ ನೋಟಿಸ್ ನೀಡಲಾಗುವುದು. ಈ ಸಂಬಂಧ ವಿಪ್ ಜಾರಿ ಮಾಡಿದ್ದರೂ ಅವರು ಸಭೆಗೆ ಏಕೆ ಹಾಜರಾಗಲಿಲ್ಲ ಎಂದು ವಿವರಣೆ ಪಡೆಯುತ್ತೇವೆ' ಎಂದು ಸಂಸದ ಅನಿಲ್ ದೇಸಾಯಿ ಹೇಳಿದ್ದಾರೆ.
'ಸಂಸದೀಯ ಪಕ್ಷದ ಸಭೆಯಲ್ಲಿ ಮೂವರು ಲೋಕಸಭಾ ಸಂಸದರಾದ ಅರವಿಂದ್ ಸಾವಂತ್, ರಾಜಭಾವು ವಾಜೆ ಮತ್ತು ಅನಿಲ್ ದೇಸಾಯಿ ಹಾಜರಿದ್ದರು. ನಾನು ರಾಜ್ಯಸಭಾ ಸದಸ್ಯ. ಸಭೆಗೆ ಹಾಜರಾಗದ ಸಂಸದರು ಪಕ್ಷದ ವಿಪ್ ಉಲ್ಲಂಘಿಸಿರುವುದು ಕಂಡುಬಂದಿದೆ. ಆದ್ದರಿಂದ, ಕ್ರಮ ಕೈಗೊಳ್ಳಲಾಗಿದೆ. ಸಭೆಗೆ ಗೈರಾದ ಸಂಸದರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಮತ್ತು ಅವರಿಂದ ಪ್ರತಿಕ್ರಿಯೆ ಪಡೆಯಲಾಗುವುದು. ಸದಸ್ಯತ್ವ ರದ್ದತಿಯ ಬಗ್ಗೆಯೂ ಪರಿಶೀಲಿಸುತ್ತೇವೆ' ಎಂದು ರಾಜ್ಯಸಭಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

