ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿರುವ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ವಿಜ್ಞಾನಿ ಮತ್ತು ಹೋರಾಟಗಾರ ಸೋನಮ್ ವಾಂಗ್ಚುಕ್ ಬೆಂಬಲ ನೀಡಿದ್ದಾರೆ.
ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಜೆಪಿ ಪ್ರತಿಭಟನೆ ಮಾಡುತ್ತಿದೆ.
ಪ್ರತಿಭಟನೆಯಲ್ಲಿ ಭಾಗವಹಿಸುವವರು ಒಂದು ಪುಸ್ತಕ ಮತ್ತು ರಾಷ್ಟ್ರೀಯ ಧ್ವಜವನ್ನು ಹಿಡಿದುಕೊಂಡು ಬನ್ನಿ. ಪೊಲೀಸರು ನಿಮ್ಮ ಮೇಲೆ ದೌರ್ಜನ್ಯ ಮಾಡಿದರೆ ಹೂ ನೀಡಿ ಎಂದು ಅಭಿಜಿತ್ ದೀಪ್ಕೆ ಹೇಳಿದ್ದರು.
ಜಂತರ್ ಮಂತರ್‌ನಲ್ಲಿ ಕಾಣಿಸಿಕೊಂಡ ಸೋನಮ್ ವಾಂಗ್ಚುಕ್ ಅವರು ಕೈಯಲ್ಲಿ ಹೂ ಹಿಡಿದುಕೊಂಡು ಬಂದು ಗಮನ ಸೆಳೆದರು.
ಒಂದು ವೇಳೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ಪೊಲೀಸರು ಬಂಧಿಸಿದರೆ, ನಾನು ಈ ಪ್ರತಿಭಟನೆಯನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
'ಪ್ರತಿಭಟನೆಯ ವೇಳೆ ಯುವ ಜನರು ಶಾಂತಿಯನ್ನು ಕಾಪಾಡಿ ಮತ್ತು ಅಧಿಕಾರಿಗಳಿಗೆ ಸಹಕಾರ ನೀಡಿ. ಪ್ರತಿಭಟನೆಗೆ ಬರುವಾಗ ನೀರಿನ ಬಾಟಲ್, ಮೊಬೈಲ್ ಪೋನ್‌ನಂತಹ ಅಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಬನ್ನಿ. ಯಾರಾದರೂ ಗಲಭೆ ಮಾಡುವ ಉದ್ದೇಶದಿಂದ ಆಯುಧ ಅಥವಾ ಅನುಮಾನಸ್ಪದ ವಸ್ತುಗಳನ್ನು ತೆಗೆದುಕೊಂಡು ಬಂದರೆ, ಅವರನ್ನು ತಕ್ಷಣವೇ ಪೊಲೀಸರ ವಶಕ್ಕೆ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.
ಈ ವೇಳೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
'ನಾನೊಬ್ಬ ಗೌರವಾನ್ವಿತ ಜಿರಳೆ' ಎನ್ನುವ ಮೂಲಕ, ಸಿಜೆಪಿಯ ಆರಂಭದ ದಿನಗಳಲ್ಲೇ ಅದಕ್ಕೆ ವಾಂಗ್ಚುಕ್ ಬೆಂಬಲ ನೀಡಿದ್ದರು.

