ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸರಣಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5ರಷ್ಟು ದಾಖಲಾಗಿದೆ. ಯಾವುದೇ ಆಸ್ತಿ, ಜೀವಹಾನಿ ಆಗದಿದ್ದರೂ ಈ ಪ್ರದೇಶದ ಜನರಲ್ಲಿ ಆತಂಕ ಹುಟ್ಟಿಸಿದೆ.ಶುಕ್ರವಾರ ರಾತ್ರಿ 10.04ರ ಸುಮಾರಿಗೆ 5 ತೀವ್ರತೆಯ ಭೂಕಂಪ ಸಂಭವಿಸಿದೆ.
ಧರ್ಮಶಾಲಾದಿಂದ ಸುಮಾರು 40 ಕಿ.ಮೀ ದೂರದ ಕಾಂಗ್ರಾ-ಚಂಬಾ ಗಡಿಯಲ್ಲಿರುವ ಧೌಲಾಧರ್ ಶ್ರೇಣಿಗಳಲ್ಲಿನ ಧಾರ್ ಘಡೋಯಿ ಮತ್ತು ಆರ್.ಎಫ್. ಕುಗ್ಟಿ ನಡುವೆ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಭೂಮಿಯಿಂದ 22.5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಕಾಂಗ್ರಾ, ಚಂಬಾ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪಶ್ಚಾತ್ ಕಂಪನದ ಅನುಭವವಾಗಿದೆ. ಕೆಲ ನಿವಾಸಿಗಳು ಭೂಮಿಯು ಜೋರಾಗಿ ನಡುಗಿದ ಬಗ್ಗೆ ಹೇಳಿಕೊಂಡಿದ್ದಾರೆ. ಮುನ್ನೆಚ್ಚರಿಕೆಯಾಗಿ ಅನೇಕರು ತಮ್ಮ ಮನೆಗಳು ಮತ್ತು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಶುಕ್ರವಾರ ಬೆಳಿಗ್ಗೆ 8.52ಕ್ಕೆ ಧರ್ಮಶಾಲಾದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಧೌಲಾಧರ್ ಶ್ರೇಣಿಗಳಲ್ಲಿರುವ ಮಿಂಕಿಯಾನಿ ಪಾಸ್ ಬಳಿ ಮೊದಲಿಗೆ 2.3 ತೀವ್ರತೆಯ ಲಘು ಭೂಕಂಪ ದಾಖಲಾಗಿದೆ. ಬಳಿಕ ರಾತ್ರಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ವಲ್ಪ ಸಮಯದಲ್ಲೇ ಇನ್ನೆರಡು ಕಂಪನಗಳು ಸಂಭವಿಸಿವೆ.
ಧರ್ಮಶಾಲಾ ಇರುವ ಕಾಂಗ್ರಾ ಜಿಲ್ಲೆಯು ಭಾರತದಲ್ಲಿ ಅತಿ ಹೆಚ್ಚು ಭೂಕಂಪ-ಅಪಾಯದ ವರ್ಗವಾದ ಭೂಕಂಪ ವಲಯ-5ರ ಅಡಿ ಬರುತ್ತದೆ.

