ವಾಷಿಂಗ್ಟನ್ (PTI/AFP): 'ನಾವು ಮತ್ತು ಇರಾನ್ ಉತ್ತಮ ಒಪ್ಪಂದವೊಂದಕ್ಕೆ ಸಹಿ ಹಾಕಲ್ಲಿದ್ದೇವೆ. ಅಣ್ವಸ್ತ್ರ ಅಭಿವೃದ್ಧಿಪಡಿಸುವುದಿಲ್ಲ ಅಥವಾ ಖರೀದಿಸುವುದೂ ಇಲ್ಲ ಎಂದು ಇರಾನ್ ಭರವಸೆ ನೀಡಿದೆ. ನಾವು ಅಂದುಕೊಂಡತೆ ಆಗದಿದ್ದಲ್ಲಿ, ಯುದ್ಧವು ಬೇರೆಯದೇ ರೀತಿಯಲ್ಲಿ ಅಂತ್ಯ ಕಾಣಲಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಸೊಸೆ ಲಾರಾ ಟ್ರಂಪ್ ಅವರು ಫಾಕ್ಸ್ ನ್ಯೂಸ್‌ನಲ್ಲಿ ನಡೆಸಿದ ಸಂದರ್ಶನದಲ್ಲಿ ಟ್ರಂಪ್ ಮಾತನಾಡಿದರು. ಅಮೆರಿಕವು ಕಠಿಣ ಷರತ್ತುಗಳಿರುವ ಪರಿಷ್ಕೃತ ಒಪ್ಪಂದವನ್ನು ಶನಿವಾರ ಕಳುಹಿಸಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. ಕಠಿಣ ಷರತ್ತುಗಳು ಯಾವುವು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
'ನಾವು ಅಣ್ವಸ್ತ್ರ ಅಭಿವೃದ್ಧಿಪಡಿಸುವುದಿಲ್ಲ ಎಂದು ಇರಾನ್ ನಮಗೆ ತಿಳಿಸಿದೆ. ಒಂದು ವೇಳೆ ನೀವು ಖರೀದಿಸಿದರೆ ಎಂದು ನಾನು ಕೇಳಿದೆ. ಅದಕ್ಕೆ ಅವರು ಉತ್ತರಿಸಿ, 'ನಾವು ಪರಮಾಣು ಅಸ್ತ್ರವನ್ನು ಅಭಿವೃದ್ಧಿಯನ್ನೂ ಪಡಿಸುವುದಿಲ್ಲ ಖರೀದಿಸುವುದೂ ಇಲ್ಲ' ಎಂದಿದ್ದಾರೆ. ಇದು ದೊಡ್ಡ ಪ್ರಗತಿ' ಎಂದರು.
'ಇರಾನ್ ಮೇಲೆ ನಾವು ಹಿಡಿತ ಸಾಧಿಸಿದ್ದೇವೆ. ಅವರ ನೌಕಾ ಪಡೆ ಮತ್ತು ವಾಯು ಪಡೆಗಳು ಸಂಪೂರ್ಣವಾಗಿ ನಾಶವಾಗಿವೆ. ಅದರ ಸೇನಾ ಬಲವನ್ನು ಸಂಪೂರ್ಣ ನಾಶ ಮಾಡಿಲ್ಲ. ಯಾಕೆಂದರೆ, ಅಲ್ಲಿನ ಕೆಲವು ನಾಯಕರು ನಮ್ಮ ಪರವಾಗಿ ಮೃದು ಧೋರಣೆ ಹೊಂದಿದವರು ಇದ್ದಾರೆ' ಎಂದರು.
ಒಪ್ಪಂದದಲ್ಲಿ ಮಾರ್ಪಾಡು ಮಾಡಿ, ಟ್ರಂಪ್ ಅವರು ಹೊಸದಾಗಿ ಕಠಿಣ ಷರತ್ತುಗಳನ್ನು ವಿಧಿಸುರುವ ಕಾರಣ ಎರಡೂ ದೇಶಗಳ ಕದನ ವಿರಾಮ ಕುರಿತ ಮಾತುಕತೆಯು ಇನ್ನಷ್ಟು ದಿನ ಮುಂದೆ ಹೋಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪರಮಾಣು ಅಸ್ತ್ರ ಅಭಿವೃದ್ಧಿ ಮತ್ತು ಹೊರ್ಮುಜ್ ಜಲಸಂಧಿ ಕುರಿತು ಟ್ರಂಪ್ ಅವರು ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

