ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ನಡುವೆ ಪಾಲುದಾರಿಕೆ ವಿಸ್ತರಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇಂಡೋನೇಷ್ಯಾದ ವಿದೇಶಾಂಗ ಸಚಿವ ಸುಗಿಯೊನೊ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಭಾರತ ಮತ್ತು ಇಂಡೋನೇಷ್ಯಾ ಜಂಟಿ ಆಯೋಗದ ಎಂಟನೇ ಸಭೆಗಾಗಿ ಸುಗಿಯೊನೊ ಮತ್ತು ಅವರ ಆಯೋಗ ನವದೆಹಲಿಗೆ ಬಂದಿದೆ.
'ಉಭಯ ದೇಶಗಳ ನಡುವಿನ ಸಮಗ್ರ ಪಾಲುದಾರಿಕೆ ಕಾರ್ಯತಂತ್ರಕ್ಕೆ ಈ ಭೇಟಿಯು ಹೊಸ ಚೈತನ್ಯ ತುಂಬಲಿದೆ' ಎಂದು ಜೈಶಂಕರ್ ಅವರು ತಿಳಿಸಿದರು.
'ಕಳೆದ ವರ್ಷ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೋ ಅವರ ಭಾರತ ಭೇಟಿಯು ಉಭಯ ದೇಶಗಳ ಪಾಲುದಾರಿಕೆಯಲ್ಲಿ ಹೊಸ ಹಾದಿ ರೂಪಿಸುವಲ್ಲಿ ಸಹಾಯಕವಾಗಿದೆ' ಎಂದು ಸುಗಿಯೊನೊ ಅವರು ಹೇಳಿದರು.
ರಕ್ಷಣೆ, ಕಡಲ ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಔಷಧ ಮತ್ತು ಆಹಾರ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರದ ಕುರಿತು ವ್ಯಾಪಕ ಚರ್ಚೆ ನಡೆಸಲಾಗಿದೆ.

