ಲಂಡನ್: ಬ್ರಿಟನ್-ಭಾರತ ಸಂಬಂಧಗಳನ್ನು ಉನ್ನತೀಕರಿಸುವಲ್ಲಿ ಅಸಾಧಾರಣ ನಾಯಕತ್ವ ಪ್ರದರ್ಶಿಸಿದ್ದಕ್ಕಾಗಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರಿಗೆ ಲಂಡನ್ನಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾಗವಹಿಸಿದ್ದ ಎರಡೂ ದೇಶಗಳ ಸಮಾಲೋಚಕರನ್ನೂ ಇದೇವೇಳೆ ಗೌರವಿಸಲಾಯಿತು.
ಸಚಿವ ಪೀಯೂಷ್ ಗೋಯಲ್ ಅವರಿಗೆ 'ಭಾರತ-ಬ್ರಿಟನ್ ಸಂಬಂಧಗಳನ್ನು ಉನ್ನತೀಕರಿಸುವಲ್ಲಿ ಅಸಾಧಾರಣ ಪಾತ್ರ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜುಲೈ 15ರಂದು ಜಾರಿಗೆ ಬರಲಿರುವ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ (ಸಿಇಟಿಎ) ಸಂಭ್ರಮದ ನಡುವೆ ಇಂಡಿಯಾ ಗ್ಲೋಬಲ್ ಫೋರಮ್'ನ (ಐಜಿಎಫ್) ಬ್ರಿಟನ್-ಇಂಡಿಯಾ ಅವಾರ್ಡ್ಸ್ 2026' ಗುರುವಾರ ಸಂಜೆ ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ವಿಶೇಷ ಪ್ರಶಸ್ತಿ ಸ್ವೀಕರಿಸುವಾಗ ಗೋಯಲ್ ಅವರೊಂದಿಗೆ ಬ್ರಿಟನ್ ಸಚಿವ ಪೀಟರ್ ಕೈಲ್ ಮತ್ತು ಐಜಿಎಫ್ ಸಂಸ್ಥಾಪಕ ಮನೋಜ್ ಲಾಡ್ವಾ ಉಪಸ್ಥಿತರಿದ್ದರು.
'ಇದೊಂದು ಯಶಸ್ಸು ಎನ್ನುವ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಈ ಒಪ್ಪಂದವು ಭವಿಷ್ಯದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವ ದೇಶಗಳಿಗೆ ರೋಲ್ ಮಾಡೆಲ್ ಆಗಿ ಉಳಿಯಲಿದೆ' ಎಂದು ಗೋಯಲ್ ಹೇಳಿದ್ಧಾರೆ.
'ಇದು ಕೇವಲ ಸುಂಕ ಮತ್ತು ನಿಯಮಗಳಷ್ಟೇ ಸೀಮಿತವಲ್ಲ. ಸರಕು ಮತ್ತು ಸೇವೆ ಮಾತ್ರವೂ ಅಲ್ಲ. ತಂತ್ರಜ್ಞಾನ, ಶಿಕ್ಷಣ, ಸಂಸ್ಕೃತಿ ಮತ್ತು ಕಲೆಯಲ್ಲಿ ಒಡಂಬಡಿಕೆ ಪ್ರಮುಖವಾದದ್ದಾಗಿದೆ. ಉಭಯ ದೇಶಗಳಿಗೂ ಈ ಒಪ್ಪಂದ ಅತ್ಯುತ್ತಮವಾದದ್ದನ್ನು ನೀಡುತ್ತದೆ' ಎಂದಿದ್ದಾರೆ.
'ಇದೊಂದು ನ್ಯಾಯಯುತ, ಸಮಾನತೆಯ, ಸಮತೋಲನದಿಂದ ಒಪ್ಪಂದವಾಗಿದೆ. ನಾವು ಪ್ರತಿಯೊಂದು ಸಾಲಿಗೂ, ಪ್ರತಿಯೊಂದು ಉತ್ಪನ್ನಕ್ಕೂ ಹೋರಾಡಿರಬಹುದು. ಆದರೆ, ನ್ಯಾಯಯುತವಾಗಿ, ಹೊಂದಾಣಿಕೆಯ ಮನೋಭಾವದಿಂದ, ಪರಸ್ಪರರ ಹಿತಾಸಕ್ತಿ ಮತ್ತು ಕಾಳಜಿಗೆ ಬಹಳ ಸೂಕ್ಷ್ಮವಾಗಿ ವರ್ತಿಸಿದ್ದೇವೆ. ಆದ್ದರಿಂದ, ಹಲವು ವರ್ಷಗಳಿಂದ ಗಂಟೆಗಟ್ಟಲೆ ಶ್ರಮ ವಹಿಸಿ ಕೆಲಸ ಮಾಡಿದ ತಂಡಗಳನ್ನು ನಾನು ಶ್ಲಾಘಿಸಲು ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.

