ಕಾಸರಗೋಡು: ಕಿನನೂರು ಕರಿಂದಳ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಸಿಸಿಪಿಎಲ್ ಸಂಸ್ಥೆ ಪ್ರಕೃತಿ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆ ರಾಜ್ಯಕ್ಕೆ ಮಾದರಿಯಾಗುತ್ತಿದೆ. ಕೈಗಾರಿಕಾ ಇಲಾಖೆಯ ಅಧೀನದಲ್ಲಿರುವ ಸಾರ್ವಜನಿಕ ವಲಯದ ಜೇಡಿಮಣ್ಣು-ಲ್ಯಾಟರೈಟ್ ಗಣಿಗಾರಿಕೆಯೊಂದಿಗೆ ಬಂಜರು ಭೂಮಿಯಗಿದ್ದ ಪ್ರದೇಶ ಹಸಿರುವನವಾಗಿ ಮಾರ್ಪಟ್ಟಿದೆ.
ಕೆಂಪುಕಲ್ಲು ಗಣಿಗಾರಿಕೆಯ ನಂತರ ಉಪೇಕ್ಷಿಸಲಾಗಿದ್ದ ಜಾಗದಲ್ಲಿ ಮಣ್ಣನ್ನು ತುಂಬುವ ಮೂಲಕ ಇಲ್ಲಿನ ಹಸಿರು ಉದ್ಯಾನವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ರುದ್ರಾಕ್ಷಮ್, ಏಳಿಲಂಪಾಲ ಸೇರಿದಂತೆ ಅಳಿವಿನಂಚಿನಲ್ಲಿರುವ ಅಪೂರ್ವ ಸಸ್ಯಗಳು ಸೇರಿದಂತೆ 180 ಪ್ರಭೇದಗಳ 1700 ಕ್ಕೂ ಹೆಚ್ಚು ಸ್ಥಳೀಯ ಸಸ್ಯಗಳನ್ನು ನೆಟ್ಟುಬೆಳೆಸಲಾಗಿದೆ. ಜೀವವೈವಿಧ್ಯತೆಯ ಕೇಂದ್ರವಾಗಿ ಮಾರ್ಪಟ್ಟಿರುವ ಈ ಅಪೂರ್ವ ಸಸ್ಯ ತೋಟಕ್ಕೆ ಚಿಟ್ಟೆಗಳು ಮತ್ತು ಜೇನುನೊಣಗಳು ಗುಂಪಾಗಿ ಆಗಮಿಸುತ್ತಿದೆ. ಇದು ಈ ಪ್ರದೇಶದಲ್ಲಿ ಕೃಷಿ ಬೆಳೆಗಳ ಪರಾಗಸ್ಪರ್ಶಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಕಡು ಬೇಸಿಗೆಯಲ್ಲಿ ಈ ಪ್ರದೇಶವು ಪಕ್ಷಿಗಳು ಮತ್ತು ಇತರ ಜೀವಿಗಳಿಗೆ ಉತ್ತಮ ಆವಾಸಸ್ಥಾನವಾಗುತ್ತಿದ್ದು, ನಾನಾ ಕಡೆಯಿಂದ ಪಕ್ಷಿಗಳು, ವನ್ಯಜೀವಿಗಳು ಇಲ್ಲಿಗೆ ನೆಲೆ ಅರಸಿಕೊಂಡು ಬರುತ್ತಿದೆ. ಈ ಪ್ರದೇಶದಲ್ಲಿ ಉತ್ತಮ ರೀತಿಯ ಕೃಷಿಯನ್ನೂ ನಡೆಸಲಾಗುತ್ತಿದೆ. ಕರಿಂದಲ ಸನಿಹದ ಸುಮಾರು ಎರಡು ಎಕರೆ ಭೂಮಿಯಲ್ಲಿ ಪ್ರಸಿದ್ಧ ಕುಟ್ಟಿಯಾಟ್ಟೂರ್ ಮಾವಿನ ತಳಿಯನ್ನು ಉತ್ತಮ ರೀತಿಯಲ್ಲಿ ಬೆಳೆಸಲಾಗುತ್ತಿದೆ. ಕೆಂಪುಕಲ್ಲು ಗಣಿಗಾರಿಕೆಯಿಂದ ರಚನೆಯಾಗಿರುವ ಮಳೆನೀರಿನ ಹೊಂಡವನ್ನು ಜಲಸಂರಕ್ಷಣೆ ಜತೆಗೆ ಮೀನುಸಾಕಣೆಗೂ ಬಳಸಲಾಗುತ್ತಿದೆ.
ಸುತ್ತು ಜಲಾಶಯವಿದ್ದು, ಮಧ್ಯದಲ್ಲಿರುವ 10 ಸೆಂಟ್ ಭೂಮಿಯಲ್ಲಿ ಮಿಯಾವಾಕಿ ಅರಣ್ಯವನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಜಲಾಶಯದ ಪಶ್ಚಿಮಕ್ಕೆ ಒಂದು ಎಕರೆ ಭೂಮಿಯಲ್ಲಿ ಮರಗೆಣಸು, ಕೆಂಪುಗೆಣಸು ಮತ್ತು ಬಾಳೆಹಣ್ಣನ್ನು ಸಹ ಬೆಳೆಸಲಾಗುತ್ತಿದೆ. ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಗುರುತಿಸಿ ಕೆಸಿಸಿಪಿಎಲ್ ಕಂಪೆನಿಗೆ ರಾಜ್ಯ ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಅತ್ಯುತ್ತಮ ಸಾರ್ವಜನಿಕ ವಲಯದ ಉದ್ಯಮಕ್ಕಾಗಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ.



