ಮಾಲಕಾನಗಿರಿ: ಒಡಿಶಾ-ಛತ್ತೀಸಗಢದ ಗಡಿ ಪ್ರದೇಶದ ನಕ್ಸಲರ ಅಡಗುತಾಣದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಸೇರಿದಂತೆ ಇತರ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಶರಣಾದ ನಕ್ಸಲರು ನೀಡಿದ ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಲಾಗಿತ್ತು. ಶೋಧ ಕಾರ್ಯವನ್ನು ಜಿಲ್ಲಾ ಸ್ವಯಂ ಸೇವಾ ಪಡೆ (ಡಿವಿಎಫ್) ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜಂಟಿಯಾಗಿ ನಡೆಸಿವೆ.
'ಇಂದು ಬೆಳಿಗ್ಗೆ ಬಸ್ತರ್ ಜಿಲ್ಲೆಯ (ಛತ್ತೀಸಗಢ) ದೂರ್ವಾ ಪೊಲೀಸ್ ಠಾಣೆಯ ಗಡಿಯಲ್ಲಿರುವ ಒಡಿಶಾದ ಮಾಥಿಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿರ್ಮಿಟ್ಟಿ ಮತ್ತು ಕಟುವಾಪದರ್ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಯಿತು' ಎಂದು ಮಲ್ಕನಗಿರಿ ಎಸ್.ಪಿ. ವಿನೋದ್ ಪಾಟೀಲ್ ಹೇಳಿದ್ದಾರೆ.
ಶೋಧದ ವೇಳೆ ಒಂದು ಐಎನ್‌ಎಸ್‌ಎಎಸ್ ಲೈಟ್ ಮಷಿನ್ ಗನ್ (ಎನ್‌ಎಂಜಿ), ಎರಡು ಐಎನ್‌ಎಸ್‌ಎಎಸ್ ರೈಫಲ್‌ಗಳು, ಎರಡು ಟಿಫಿನ್ ಬಾಂಬ್‌ಗಳು, 8 ಕೆ.ಜಿ. ಕಚ್ಚಾ ಬಾಂಬ್, ಒಂದು ಗ್ರೆನೇಡ್, ಒಂದು ಎಕೆ ಮ್ಯಾಗಜೀನ್, ಗನ್ ಪೌಡರ್, ಬ್ಯಾಟರಿ ಮತ್ತು ಒಂದು ಎಲೆಕ್ಟ್ರಿಕ್ ಡಿಟೋನೇಟರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

