ಕೇರಳ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ (Kerala Chief minister VD Satheesan) ಅವರ ಅಧಿಕೃತ ನಿವಾಸದಲ್ಲಿ ನಿನ್ನೆ ಮಧ್ಯಾಹ್ನ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಖ್ಯಮಂತ್ರಿಗಳ ನಿವಾಸದ ಆವರಣದಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ನಾಗರಹಾವೊಂದು (Cobra snake) ಪತ್ತೆಯಾಗಿರುವುದು ಮನೆಯವರು ಮತ್ತು ಭದ್ರತಾ ಸಿಬ್ಬಂದಿಯಲ್ಲಿ ಭೀತಿ ಮೂಡಿಸಿತ್ತು.

ಘಟನೆಯ ವಿವರ:
ನಿವಾಸದ ಆವರಣದಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ವೇಳೆ ಸಿಬ್ಬಂದಿಯೊಬ್ಬರು ಹಾವನ್ನು ಮೊದಲ ಬಾರಿಗೆ ಗಮನಿಸಿದ್ದಾರೆ. ಸುಮಾರು ಮೂರ್ನಾಲ್ಕು ಉದ್ದದ ಈ ನಾಗರಹಾವು ಆವರಣದ ಮೂಲೆಯೊಂದರಲ್ಲಿ ಇರುವುದನ್ನು ಕಂಡು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಕ್ಷಣ ಎಚ್ಚೆತ್ತುಕೊಂಡ ಸಿಎಂ ನಿವಾಸದ ಸಿಬ್ಬಂದಿ, ಅರಣ್ಯ ಇಲಾಖೆ ಮತ್ತು ಉರಗ ರಕ್ಷಣಾ ತಂಡಕ್ಕೆ ಸಂದೇಶ ರವಾನಿಸಿದರು.
ಯಶಸ್ವಿ ಕಾರ್ಯಾಚರಣೆ:
ಮಾಹಿತಿ ಸಿಕ್ಕಿದ ಕೆಲವೇ ನಿಮಿಷಗಳಲ್ಲಿ ನುರಿತ ಉರಗ ರಕ್ಷಕರ ತಂಡ ಸ್ಥಳಕ್ಕೆ ಧಾವಿಸಿತು. ಬಿಗಿ ಭದ್ರತೆಯ ನಡುವೆಯೇ ಕಾರ್ಯಾಚರಣೆ ನಡೆಸಿದ ತಂಡವು, ಯಾವುದೇ ಹಾನಿಯಾಗದಂತೆ ಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಹಿಡಿದ ಹಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ನಿಯಮಗಳ ಪ್ರಕಾರ ಅದನ್ನು ಜನವಸತಿ ಇಲ್ಲದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಹಾವನ್ನು ಪತ್ತೆಹಚ್ಚಿದ್ದರಿಂದ ಮತ್ತು ತಕ್ಷಣವೇ ರಕ್ಷಣಾ ತಂಡ ಬಂದಿದ್ದರಿಂದ ಯಾವುದೇ ಅನಾಹುತ ಸಂಭವಿಸದೆ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ವಿವಿಐಪಿ ವಲಯದಲ್ಲಿ ಹಾವು ಕಾಣಿಸಿಕೊಂಡಿರುವುದು ಭದ್ರತಾ ದೃಷ್ಟಿಯಿಂದಲೂ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಹಾವು ಕಡಿತ ಪ್ರಕರಣಗಳು ಹಾಗೂ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಭಾರೀ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾವು ಕಡಿತ ಪ್ರಕರಣ ತಗ್ಗಿಸಲು ಜನರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಇದರ ನಡುವೆಯೇ ಕೇರಳ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮನೆಗೂ ವಿಷಕಾರಿ ನಾಗರಹಾವು ಎಂಟ್ರಿ ಕೊಟ್ಟಿರುವುದು ಜನರಲ್ಲಿಆತಂಕ ಮೂಡಿಸಿದೆ.

