ಸಿಂಗಪುರ: 'ಏಷ್ಯಾ ವಲಯದಲ್ಲಿ ಚೀನಾದೊಂದಿಗೆ ಅಮೆರಿಕವು ಸ್ಥಿರ ಸಮತೋಲವನ್ನು ಬಯಸುತ್ತದೆ' ಎಂದು ಪೆಂಟಗನ್ ಮುಖ್ಯಸ್ಥ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.
ಇಲ್ಲಿ ನಡೆದ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಅವರು ಚೀನಾದ ಬಗ್ಗೆ ಅಳೆದು ತೂಗಿ ಮಾತನಾಡಿದರು.
'ಏಷ್ಯಾ ಮತ್ತು ಏಷ್ಯಾ ವಲಯದಾಚೆಗೆ ಚೀನಾದ ಮಿಲಿಟರಿ ಚಟುವಟಿಕೆಗಳ ವಿಸ್ತರಣೆಯ ಬಗ್ಗೆ ನಾವು ಎಚ್ಚರದಿಂದ ಇದ್ದೇವೆ' ಎಂದು ಹೆಗ್ಸತ್ ಹೇಳಿದರು.
'ಚೀನಾ ಸೇರಿದಂತೆ ಯಾವುದೇ ರಾಷ್ಟ್ರವು ತನ್ನ ಪ್ರಾಬಲ್ಯವನ್ನು ಏಷ್ಯಾ ವಲಯದಲ್ಲಿ ಹೇರಲು ಅಥವಾ ಇಲ್ಲಿನ ಭದ್ರತೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ' ಎಂದ ಹೆಗ್ಸತ್, ರಕ್ಷಣಾ ವೆಚ್ಚ ಹೆಚ್ಚಿಸುವಂತೆಯೂ ಏಷ್ಯಾದ ಮಿತ್ರ ರಾಷ್ಟ್ರಗಳಿಗೆ ಸಲಹೆ ನೀಡಿದರು.
45 ದೇಶಗಳ ರಕ್ಷಣಾ ಅಧಿಕಾರಿಗಳು, ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಹೆಗ್ಸತ್ ಚೀನಾದ ಬಗ್ಗೆ ನೀಡಿದ್ದ ಹೇಳಿಕೆಗೆ ಹೋಲಿಸಿದರೆ ಈ ಬಾರಿಯ ಹೇಳಿಕೆ ವ್ಯತಿರಿಕ್ತವಾಗಿದೆ.
ಚೀನಾದ ಮಿಲಿಟರಿ ಸಾಮರ್ಥ್ಯ ವಿಸ್ತರಣೆ ಹಾಗೂ ಗಡಿಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯು ಏಷ್ಯಾದಲ್ಲಿ ಹೊಸ ಉದ್ವಿಗ್ನತೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಗ್ಸತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
'ಅಮೆರಿಕವು ಏಷ್ಯಾದಲ್ಲಿ ಅನಗತ್ಯ ಮುಖಾಮುಖಿಯನ್ನು ಬಯಸುವುದಿಲ್ಲ, ಬದಲಿಗೆ ಅಮೆರಿಕನ್ನರು ಮತ್ತು ಮಿತ್ರರಾಷ್ಟ್ರಗಳ ಪರವಾದ, ಸ್ಥಿರ ಸಮತೋಲನ ಬಯಸುತ್ತದೆ. ಚೀನಾದೊಂದಿಗೆ ಗೌರವಯುತ ಮತ್ತು ವಿಶ್ವಾಸಾರ್ಹ ಸಂಬಂಧ ಮುಂದುವರಿಯುತ್ತದೆ' ಎಂದರು.
ಅಮೆರಿಕ-ತೈವಾನ್ ಶಸ್ತ್ರಾಸ್ತ್ರ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಅಂತಿಮ ನಿರ್ಧಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅವಲಂಬಿಸಿದೆ' ಎಂದು ಹೆಗ್ಸತ್ ಹೇಳಿದ್ದಾರೆ.

