HEALTH TIPS

ರಾಜ್ಯಸಭಾ ಚುನಾವಣೆ: ಶಾಸಕರ ಖರೀದಿ ಭೀತಿ, ಬೆಂಗಳೂರಿಗೆ ಮಧ್ಯಪ್ರದೇಶದ 'ಕೈ' ಶಾಸಕರು

 ಭೋಪಾಲ್: ಜೂನ್ 18 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೂ ಮುನ್ನ ತನ್ನ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಮಂಗಳವಾರ ಆರೋಪಿಸಿದ್ದಾರೆ. 


ಅಡ್ಡ ಮತದಾನ ತಡೆಯಲು ಹಾಗೂ ಒಗ್ಗಟ್ಟಾಗಿಡಲು ತನ್ನ ಶಾಸಕರನ್ನು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಸಲು ಪಕ್ಷ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

230 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಸದ್ಯ 229‌ ಶಾಸಕರಿದ್ದಾರೆ. ಈ ಪೈಕಿ ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 58 ಪ್ರಥಮ ಪ್ರಾಶಸ್ತ್ಯದ ಮತಗಳು ಬೇಕು.

164 ಶಾಸಕರನ್ನು ಹೊಂದಿರುವ ಆಡಳಿತಾರೂಢ ಬಿಜೆಪಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ರಾಜ್ಯ ಘಟಕದ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಹಾಗೂ ಕೊನೆ ಕ್ಷಣದಲ್ಲಿ ಮೂರನೇ ಅಭ್ಯರ್ಥಿಯಾಗಿ ಮಧ್ಯಪ್ರದೇಶ ಮೀನುಗಾರರ ಕಲ್ಯಾಣ ಮಂಡಳಿಯ ಅಧ್ಯಕ್ಷ ಮಹೇಶ್ ಕೇವತ್ ಅವರನ್ನು ಕಣಕ್ಕಿಳಿಸಿದೆ.

ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮೂರನೇ ಅಭ್ಯರ್ಥಿ ಗೆಲ್ಲುವಷ್ಟು ಸಂಖ್ಯಾಬಲ ಬಿಜೆಪಿಗೆ ಇಲ್ಲಿದ್ದರೂ, ಕಾಂಗ್ರೆಸ್ ಮತಗಳನ್ನು ಸೆಳೆಯುವ ವಿಶ್ವಾಸದಿಂದ ಕೇವತ್ ಅವರನ್ನು ಕಣಕ್ಕಿಳಿಸಿದೆ.

ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರ ನಿವಾಸದಲ್ಲಿ ಸೋಮವಾರ ತಡರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯಿತು. ಮತದಾನದವರೆಗೆ ಶಾಸಕರನ್ನು ಮಧ್ಯಪ್ರದೇಶದಿಂದ ಹೊರಗೆ ಕರೆದೊಯ್ಯುವ ಪ್ರಸ್ತಾಪದ ಕುರಿತು ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಶಾಸಕರನ್ನು ಪಕ್ಷದ ಆಡಳಿತವಿರುವ ಕರ್ನಾಟಕದ ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸೌನ್ಸರ್ ಶಾಸಕ ವಿಜಯ್ ರೇವನಾಥ್ ಚೌರೆ ಪಿಟಿಐಗೆ ತಿಳಿಸಿದ್ದಾರೆ.


ಬೆಂಗಳೂರಿಗೆ ಸ್ಥಳಾಂತರಿಸುತ್ತಿರುವುದು ಹೌದು ಎಂದು ಶಾಸಕರಾದ ಯಾದವೇಂದ್ರ ಸಿಂಗ್ ಮತ್ತು ಬಾಬು ಜಾಂಡೆಲ್ ಖಚಿತಪಡಿಸಿದ್ದಾರೆ.

'ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಅವರೆಲ್ಲರನ್ನೂ ಪಕ್ಷದ ಆಡಳಿತವಿರುವ ರಾಜ್ಯಕ್ಕೆ ಸ್ಥಳಾಂತರಿಸಲಾಗುವುದು' ಎಂದು ವಿರೋಧ ಪಕ್ಷದ ನಾಯಕ ಸಿಂಘಾರ್ ತಿಳಿಸಿದ್ದಾರೆ.

'ತಮ್ಮನ್ನು ಬಿಜೆಪಿ ಸದಸ್ಯರು ನೋಟುಗಳ ಚೀಲಗಳೊಂದಿಗೆ ಸಂಪರ್ಕಿಸಿದ್ದರು, ಆದರೆ ತಾವು ಅವರನ್ನು ವಾಪಸ್ ಕಳುಹಿಸಿದ್ದಾಗಿ ಕೆಲವು ಶಾಸಕರು ತಿಳಿಸಿದ್ದಾರೆ. ಮತದಾನದ ದಿನದಂದು ಬಿಜೆಪಿಯ ಸಂಚುಗಳು ವಿಫಲವಾಗಲಿವೆ ಎಂದು ಎಂದು ಅವರು ಹೇಳಿದ್ದಾರೆ.

'ಸ್ಥಳಾಂತರಗೊಳ್ಳಲು ಕೆಲವು ಶಾಸಕರು ಒಲವು ತೋರಲಿಲ್ಲ. ಆದರೆ ಇದು ಪಕ್ಷದ ಹೈಕಮಾಂಡ್ ನಿರ್ಧಾರವಾಗಿರುವುದರಿಂದ ಎಲ್ಲರನ್ನೂ ಸ್ಥಳಾಂತರಿಸಲಾಗುತ್ತಿದೆ' ಎಂದು ಯಾದವೇಂದ್ರ ಸಿಂಗ್ ಹೇಳಿದರು.

ಸೋಮವಾರ ತಡರಾತ್ರಿ ಸಿಂಘಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸುಮಾರು 60 ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು. ಪಕ್ಷದ ಒಬ್ಬ ಶಾಸಕರು ದೆಹಲಿಯಲ್ಲಿದ್ದ ಕಾರಣ ಸಭೆಗೆ ಹಾಜರಾಗಿರಲಿಲ್ಲ, ಹಿರಿಯ ನಾಯಕ ಕಮಲ್ ನಾಥ್ ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

ವಿಧಾನಸಭೆಯಲ್ಲಿ ಬಿಜೆಪಿ 164 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ನ 64 ಶಾಸಕರಿದ್ದಾರೆ. ಭಾರತ ಆದಿವಾಸಿ ಪಾರ್ಟಿಯ ಓರ್ವ ಶಾಸಕರಿದ್ದಾರೆ. ದತಿಯಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರ ಸದಸ್ಯತ್ವ ರದ್ದುಗೊಂಡಿದ್ದರಿಂದ ಒಂದು ಸ್ಥಾನ ಖಾಲಿ ಇದೆ.

ಶಿಯೋಪುರ್ ಜಿಲ್ಲೆಯ ವಿಜಯಪುರದ ಕಾಂಗ್ರೆಸ್ ಶಾಸಕ ಮುಖೇಶ್ ಮಲ್ಹೋತ್ರಾ ಅವರಿಗೆ ಮತದಾನ ಮಾಡದಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ಬಂಧಿಸಿದೆ.

ಸಾಗರ್ ಜಿಲ್ಲೆಯ ಬಿನಾ ಕ್ಷೇತ್ರದ ಶಾಸಕಿ ನಿರ್ಮಲಾ ಸಪ್ರೆ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವ ಸಾಧ್ಯತೆಯಿದೆ.

ಸಪ್ರೆ ಅವರು ಸೋಮವಾರ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿಯಾಗಿದ್ದರು.

ಇದರಿಂದಾಗಿ ಕಾಂಗ್ರೆಸ್‌ನ ಸಂಖ್ಯಾಬಲವು 62 ಕ್ಕೆ ಇಳಿಯಲಿದೆ. ಆದರೂ ಚುನಾವಣೆಯ ಗೆಲ್ಲಲು ಬೇಕಾಗಿರುವುದಕ್ಕಿಂತ 4 ಹೆಚ್ಚು ಮತಗಳನ್ನು ಹೊಂದಿದೆ.

ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಪ್ರತಿಯೊಬ್ಬ ಅಭ್ಯರ್ಥಿಗೂ ಗೆಲ್ಲಲು 58 ಮತಗಳ ಅಗತ್ಯವಿದೆ. ಎರಡು ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ 116 ಮತಗಳ ಅಗತ್ಯವಿದೆ. ಇದಾದ ಬಳಿಕವೂ ಬಿಜೆಪಿ ಬಳಿ 48 ಮತಗಳು ಉಳಿಯಲಿವೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries