ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಲು ನೇಪಾಳ ಬಯಸಿದೆ. ಉಭಯ ದೇಶಗಳು ಮುಕ್ತ ಮನಸ್ಸಿನಿಂದ ಮುಖಾಮುಖಿ ಕುಳಿತು ಚರ್ಚಿಸಿದರೆ ಜಗತ್ತಿನ ಯಾವುದೇ ದೊಡ್ಡ ಸಮಸ್ಯೆಯನ್ನೂ ಬಗೆಹರಿಸಬಹುದು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ.
'ನೇಪಾಳದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವು ಭಾರತವನ್ನು 21ನೇ ಶತಮಾನದ ಜಿಯೋಪಾಲಿಟಿಕ್ಸ್‌ನ ಸಂಕೀರ್ಣ ಅಥವಾ ಅತಿ ಸೂಕ್ಷ್ಮ ದೃಷ್ಟಿಕೋನದಿಂದ ನೋಡಲು ಬಯಸುವುದಿಲ್ಲ. ಬದಲಿಗೆ, ಉಭಯ ರಾಷ್ಟ್ರಗಳ ಸರ್ವತೋಮುಖ ಪ್ರಗತಿಗಾಗಿ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ವೃದ್ಧಿಸಿಕೊಳ್ಳಲು ಉತ್ಸುಕವಾಗಿದೆ' ಎಂದು ಅವರು ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಮರುದಿನವೇ ಮಾಧ್ಯಮಗಳೊಂದಿಗೆ ಮಾತನಾಡಿದ ಖನಾಲ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಖನಾಲ್ ಅವರು ಶುಕ್ರವಾರದಿಂದ ಮೂರು ದಿನಗಳ ನವದೆಹಲಿ ಪ್ರವಾಸದಲ್ಲಿದ್ದಾರೆ. ಇತ್ತೀಚೆಗಷ್ಟೇ ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ಗಡಿ ವಿವಾದದ ಕುರಿತು ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಜಾಗತಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
'ನಾವು ಮುಕ್ತ ಮನಸ್ಸಿನಿಂದ ಒಟ್ಟಿಗೆ ಕುಳಿತಾಗ ಯಾವುದೇ ಸಮಸ್ಯೆಯೂ ದೊಡ್ಡದಲ್ಲ ಮತ್ತು ಯಾವುದೇ ಗಡಿಯೂ ಸಂಕೀರ್ಣವಲ್ಲ. ನಾವು ಭಾರತವನ್ನು ಮುಕ್ತ ಮನಸ್ಸು, ಸ್ಪಷ್ಟ ದೃಷ್ಟಿಕೋನ ಮತ್ತು ಒಂದೇ ಒಂದು ಪಾರದರ್ಶಕ ಕಾರ್ಯಸೂಚಿಯೊಂದಿಗೆ ನೋಡುತ್ತಿದ್ದೇವೆ. ಅದುವೇ ನೇಪಾಳದ ಆರ್ಥಿಕ ಪರಿವರ್ತನೆ' ಎಂದು ಖನಾಲ್ ಭರವಸೆ ವ್ಯಕ್ತಪಡಿಸಿದರು. ಅತಿ-ರಾಷ್ಟ್ರೀಯತೆಯ ರಾಜಕೀಯ ಪ್ರದರ್ಶನ ಮಾಡುವ ಬದಲು, ದತ್ತಾಂಶ ಆಧಾರಿತ ಮತ್ತು ಶಾಂತಿಯುತ ಮಾರ್ಗದ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ತಮ್ಮ ಸರ್ಕಾರ ಮುಂದಾಗಿದೆ ಎಂದರು.
ಇದೇ ವೇಳೆ ಭಾರತದ ಅಭೂತಪೂರ್ವ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯನ್ನು ಖನಾಲ್ ಮುಕ್ತಕಂಠದಿಂದ ಶ್ಲಾಘಿಸಿದರು. 'ನಾವು ಗಡಿಯ ಆಚೆಗೆ ನೋಡಿದಾಗ ನಮಗೆ ಕಾಣಿಸುವುದು ಉದಯೋನ್ಮುಖ ಭಾರತ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಆರ್ಥಿಕತೆಯ ಶಕ್ತಿ ಕೇಂದ್ರವಾಗಿ ಭಾರತ ತನ್ನನ್ನು ತಾನು ಅತ್ಯಂತ ಸುಂದರವಾಗಿ ಮರು ವ್ಯಾಖ್ಯಾನಿಸಿಕೊಂಡಿದೆ. ಇಂತಹ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಹತ್ವಾಕಾಂಕ್ಷೆಯ ಭಾರತದೊಂದಿಗೆ ಕೈಜೋಡಿಸಲು ನಾವು ಬಯಸುತ್ತೇವೆ. ಇದಕ್ಕೆ ಪ್ರತಿಯಾಗಿ, ನಾವು ಉನ್ನತ ಕನಸುಗಳನ್ನು ಹೊಂದಿರುವ ನೇಪಾಳದ ಯುವ ಶಕ್ತಿಯನ್ನು ಒಟ್ಟಿಗೆ ತರಲಿದ್ದೇವೆ' ಎಂದು ಅವರು ಆಶಯ ವ್ಯಕ್ತಪಡಿಸಿದರು.

