ಕಾಸರಗೋಡು: ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ (ಎಡಿಎಂ)ಯಾಗಿ ಎಡಿಎಂ ಶ್ರುತಿ ಕೆ.ವಿ. ಅವರಿಂದ ಉದಯಕುಮಾರ್ ಪೆರ್ಲ ಗುರುವಾರ ಅಧಿಕಾರ ಸ್ವೀಕರಿಸಿದರು. ಕಾಸರಗೋಡು ಸಮಾರಂಭದಲ್ಲಿ ಹುಜೂರ್ ಶಿರಸ್ತೆದಾರ್ ಸತೀಶ್ ಕುಮಾರ್, ಸೂಪರಿಂಟೆಂಡೆಂಟ್ ಲೋಕೇಶ್ ಎಂ.ಬಿ. ಹಾಗೂ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
1997ರಲ್ಲಿ ಕಾಸರಗೋಡು ಭೂಸ್ವಾಧೀನ (ಲ್ಯಾಂಡ್ ಅಕ್ವಿಸಿಷನ್) ಕಚೇರಿಯಲ್ಲಿ ಎಲ್.ಡಿ. ಕ್ಲರ್ಕ್ ಆಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಉದಯಕುಮಾರ್ ಪೆರ್ಲ ಅವರು ನಂತರ ಕಾಸರಗೋಡು ತಾಲೂಕು ಕಚೇರಿಯಲ್ಲಿ ಸೀನಿಯರ್ ಕ್ಲರ್ಕ್ ಆಗಿದ್ದು, 2006ರಲ್ಲಿ ಗ್ರಾಮಾಧಿಕಾರಿಯಾಗಿ ಬಡ್ತಿ ಹೊಂದಿದ್ದರು.
2014ರಲ್ಲಿ ಜೂನಿಯರ್ ಸೂಪರಿಂಟೆಂಡೆಂಟ್ ಆಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಬಡ್ತಿ ಹೊಂದಿದ ಅವರು, ನಂತರ ಮಂಜೇಶ್ವರ ತಾಲ್ಲೂಕು ಕಚೇರಿ, ಎಲ್.ಎ.ಎನ್.ಎಚ್. ಕಾಸರಗೋಡು ಹಾಗೂ ಆರ್.ಡಿ. ಕಚೇರಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. 2020ರಲ್ಲಿ ಸೀನಿಯರ್ ಸೂಪರಿಂಟೆಂಡೆಂಟ್ ಆಗಿ ಬಡ್ತಿ ಹೊಂದಿ, 2021ರಿಂದ 2025ರವರೆಗೆ ಕಾಸರಗೋಡು ಭೂ ನ್ಯಾಯಮಂಡಳಿ (ಲ್ಯಾಂಡ್ ಟ್ರಿಬ್ಯುನಲ್)ಯಲ್ಲಿ ಸೇವೆ ಸಲ್ಲಿಸಿ ಭೂ ಸುಧಾರಣೆಗೆ ಸಂಬಂಧಿಸಿದ ಅನೇಕ ಕಡತಗಳನ್ನು ಸಮಯೋಚಿತವಾಗಿ ವಿಲೇವಾರಿ ಮಾಡುವ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದರು.
ಜಿಲ್ಲಾಡಳಿತದ "ಆಪರೇಶನ್ ಸ್ಮೈಲ್" ಯೋಜನೆಯಡಿ ಪಾವೂರು, ಉದ್ಯಾವರ ಹಾಗೂ ಕುಂಜತ್ತೂರು ಗ್ರಾಮಗಳ ವ್ಯಾಪ್ತಿಯ 135 ಕೊರಗ ಸಮುದಾಯದ ಕುಟುಂಬಗಳಿಗೆ ಕ್ರಯ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕಾಗಿ ಜಿಲ್ಲಾಧಿಕಾರಿಗಳ ಉತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರು ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದ ದಿ.ಮಾಧವ ಚೆಟ್ಟಿಯಾರ್ ಮತ್ತು ಶಾರದಾ ದಂಪತಿಗಳ ಪುತ್ರರಾಗಿರುವ ಉದಯಕುಮಾರ್ ಪೆರ್ಲ ಅವರ ಪತ್ನಿ ಶ್ರೀಜಾ ಎಂ.ವಿ. ಕೃಷ್ಣ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕಿಯಾಗಿದ್ದು, ಅಜಯ್ ಸಾತ್ವಿಕ್ ಮತ್ತು ಶ್ರೀಲಕ್ಷ್ಮಿ ವಿದ್ಯಾರ್ಥಿಗಳಾಗಿದ್ದಾರೆ.



