ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಸ್ಲೊವಾಕಿಯ ದೇಶದ ಪ್ರವಾಸ ಕೈಗೊಂಡಿದ್ದಾರೆ. ಅವರು ಶನಿವಾರ ಜೂನ್ (13) ಫ್ರಾನ್ಸ್‌ನ ನೈಸ್ ಕೋಟ್ ಡಿ ಅಜುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ನೈಸ್ ಕೋಟ್ ಡಿ'ಅಜುರ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಫ್ರಾನ್ಸ್‌ನ ಶಿಕ್ಷಣ ಸಚಿವ ಎಡ್ವರ್ಡ್ ಗೆಫ್ರೆ, ಉನ್ನತ ಶಿಕ್ಷಣ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಹಾಗೂ ಭಾರತದ-ಫ್ರಾನ್ಸ್ ರಾಯಭಾರಿಯಾಗಿರುವ ಥಿಯೆರಿ ಮ್ಯಾಥೌ ಸೇರಿ ಅನೇಕ ಗಣ್ಯರು ಬರ ಮಾಡಿಕೊಂಡಿದ್ದಾರೆ.
ಅನಿವಾಸಿ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ.
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಮೋದಿ, 'ಈ ಪ್ರವಾಸದಲ್ಲಿ ನೈಸ್ ನಗರದ ಜೊತೆಗೆ ಎವಿಯನ್ ಮತ್ತು ಪ್ಯಾರಿಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಜೂನ್ 15 ರಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ಬಳಿಕ 'ಭಾರತ್ ಇನ್ನೋವೇಟ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಉತ್ಸುಕನಾಗಿದ್ದೇನೆ' ಎಂದಿದ್ದಾರೆ.
'ನೈಸ್ ನಗರದಲ್ಲಿರುವ ಭಾರತೀಯರಿಂದ ಸ್ಮರಣೀಯ ಸ್ವಾಗತ ಸಿಕ್ಕಿದೆ. ಭಾರತೀಯ ವಲಸಿಗರು ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ, ಭಾರತದೊಂದಿಗಿನ ಒಡನಾಟ ಮತ್ತು ಬಾಂಧವ್ಯ ಹೊಂದಿರುವುದನ್ನು ನೋಡಲು ಖುಷಿಯಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.
ಜೂನ್ 15ರಂದು ಸ್ಲೊವಾಕಿಯಕ್ಕೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಮತ್ತು ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಬ್ರಾಟಿಸ್ಲಾವಾದಲ್ಲಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಜಿ7 ಶೃಂಗಸಭೆಯಲ್ಲಿ ನಾಯಕರು ಮತ್ತು ಆಹ್ವಾನಿತ ಪಾಲುದಾರ ದೇಶಗಳೊಂದಿಗೆ ಅಂತರರಾಷ್ಟ್ರೀಯ ಸಹಕಾರ, ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸುವುದಾಗಿ ಮೋದಿ ಅವರು ತಿಳಿಸಿದ್ದಾರೆ.

