ನವದೆಹಲಿ: ಇಂದು ನಾನು ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿರಬಹುದು, ಆದರೆ ಅಂದು(ಬಾಲ್ಯದಲ್ಲಿ) ಕಾಡಿನಲ್ಲಿಯೇ ರಾತ್ರಿ ಕಳೆದ ದಿನಗಳಿದ್ದವು...ಇವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾವುಕ ನುಡಿಗಳು.
ಸಂಸದ ಕಪಿಲ್ ಸಿಬಲ್ ಅವರ 'ದಿಲ್ ಸೇ' (ಆiಟ Se) ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ತಮ್ಮ ಬಾಲ್ಯದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನನಗೆ ಆಗ ಕೇವಲ 6 ವರ್ಷ. ಬೀದರ್‌ನಲ್ಲಿ ರಜಾಕಾರರು ದಾಳಿ ನಡೆಸಿ ನಮ್ಮ ಮನೆಗೆ ಬೆಂಕಿ ಇಟ್ಟರು. ಅದೃಷ್ಟವಶಾತ್ ಆ ವೇಳೆ ನನ್ನ ತಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅಲ್ಲಿಯೇ ಆಟವಾಡುತ್ತಿದ್ದೆ. ಹಾಗಾಗಿ ಬದುಕಿಕೊಂಡೆ. ಆದರೆ ಆ ದುರಂತದಲ್ಲಿ ನನ್ನ ತಾಯಿ, ಸಹೋದರ, ಸಹೋದರಿ ಮತ್ತು ಚಿಕ್ಕಪ್ಪ ಜೀವಂತವಾಗಿ ದಹನವಾದರು.
ಇಡೀ ಕುಟುಂಬವನ್ನು ಕಳೆದುಕೊಂಡ ನನ್ನ ತಂದೆ, ಜೀವ ಉಳಿಸಿಕೊಳ್ಳಲು ನನ್ನೊಂದಿಗೆ ಊರು ಬಿಟ್ಟು ಹೊರಡುವ ಕಠಿಣ ನಿರ್ಧಾರ ತೆಗೆದುಕೊಂಡರು.
ನಿಜಾಮನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯದಿಂದ ಸಂಬಂಧಿಕರು ಕೂಡ ಆಶ್ರಯ ನೀಡಲು ನಿರಾಕರಿಸಿದರು. ಯಾರೂ ಆಶ್ರಯ ನೀಡದಿದ್ದಾಗ ನಾವು ಕೆಲವು ರಾತ್ರಿಗಳನ್ನು ಕಾಡಿನಲ್ಲಿ ಕಳೆಯಬೇಕಾಯಿತು. 6 ವರ್ಷದ ಮಗುವಾಗಿದ್ದ ನಾನು ಕಾಡಿನ ಎಲೆಗಳ ಮೇಲೆ ಮಲಗಿದ್ದೆ ಎಂದು ಅವರು ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.
ಬದುಕಿನ ಹುಡುಕಾಟದಲ್ಲಿದ್ದ ನಾವು ಕೊನೆಗೆ ಕಲಬುರಗಿಗೆ ತಲುಪಿದೆವು. ಅಲ್ಲಿ ವ್ಯಕ್ತಿಯೊಬ್ಬರ ಸಹಾಯದಿಂದ ನನಗೆ ಶಾಲೆಗೆ ಸೇರಲು ಅವಕಾಶ ಸಿಕ್ಕಿತು. ತಂದೆಗೆ ಅಲ್ಲಿನ ಗಿರಣಿಯೊಂದರಲ್ಲಿ ಅರೆಕಾಲಿಕ ಕೆಲಸ ಸಿಕ್ಕಿತು. ಆ ಗಿರಣಿಯ ಆವರಣದಲ್ಲೇ ಶಾಲೆ ಇತ್ತು ಎಂದು ಖರ್ಗೆ ತಿಳಿಸಿದ್ದಾರೆ.
ಇಂದು ನಾನು ಏನೇ ಆಗಿದ್ದರೂ ಅದಕ್ಕೆ ನನ್ನ ತಂದೆಯೇ ಕಾರಣ. ಇಡೀ ಕುಟುಂಬವನ್ನು ಕಳೆದುಕೊಂಡ ಅವರು, ಉಳಿದಿದ್ದ ಒಬ್ಬ ಮಗನಿಗೆ ಅತ್ಯುತ್ತಮ ಜೀವನ ನೀಡಬೇಕೆಂದು ಬಯಸಿದ್ದರು ಎಂದು ಖರ್ಗೆ ಭಾವುಕರಾದರು.
ಮುಂದೆ ಕಾನೂನು ವ್ಯಾಸಂಗ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಕಾರ್ಮಿಕ ಚಳವಳಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು. ಆನಂತರ ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಇಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

