ಕುಂಬಳೆ: ಕುಂಬಳೆ ಸನಿಹದ ಅನಂತಪುರದ ಗುಡ್ಡಪ್ರದೇಶದಲ್ಲಿ ಕಾರು ನಿಲ್ಲಿಸಿ ಮಾತನಾಡುತ್ತಿದ್ದ ಯುವಕ ಹಾಗೂ ಈತನ ಸ್ನೇಹಿತೆಯಾಗಿರುವ ಯುವತಿಗೆ ಥಳಿಸಿ ಚಾಕು ತೋರಿಸಿ, ಅದೇ ಕಾರಿನಲ್ಲಿ ಅಪಹರಿಸಿ ಬೆದರಿಕೆಯೊಡ್ಡಿ ಹಣ, ಮೊಬೈಲ್ ಎಗರಿಸಿದ ತಂಡವನ್ನು ಕುಂಬಳೆ ಠಾಣೆ ಪೊಲೀಸರುಬಂಧಿಸಿದ್ದಾರೆ.
ಮೊಗ್ರಾಲ್ ಮೈಮೂನ್ ನಗರ ನೀರೋಲಿ ಹೌಸ್‍ನ ಅಫ್ಜಲ್ (29) ಮತ್ತು ಕುನ್ನಿಲ್‍ಹೌಸ್‍ನ ಮೊಹಮ್ಮದ್ ಮನ್ಸೂರ್ ಯಾನೆ ಫೈಜಿ (27) ಬಂಧಿತರು. ಸೋಮವಾರ ಘಟನೆ ನಡೆದಿದ್ದು, ಮೊಗ್ರಾಲ್ ಮೈಮೂನ್ ನಗರದ 20 ವರ್ಷದ ಯುವಕ ಮತ್ತು ಆತನ 18 ವರ್ಷದ ಗೆಳತಿ ಹಲ್ಲೆಗೀಡಾದವರು. ಅನಂತಪುರ ಕ್ಷೇತ್ರ ಸನಿಹದ ಗುಡ್ಡದಲ್ಲಿ ಕಾರುನಿಲ್ಲಿಸಿ ಜೋಡಿ ಮಾತನಾಡುತ್ತಿದ್ದ ಸಂದರ್ಭ ಆಟೋರಿಕ್ಷಾದಲ್ಲಿ ಆಗಮಿಸಿದ ಮೂವರ ತಂಡ ಕಾರಿನಲ್ಲಿದ್ದವರನ್ನು ಅವಾಚ್ಯವಾಗಿ ಬೈದು, ಥಳಿಸಿ, ಅದೇ ಕಾರಿನಲ್ಲಿ ಜೋಡಿಯನ್ನು ಅಪಹರಿಸಿ ಸೀತಾಂಗೋಳಿಯ ಬೀವರೇಜಸ್ ಸನಿಹ ತಲುಪುತ್ತಿದ್ದಂತೆ ಯುವಕನ ಕೈಯಲ್ಲಿದ್ದ 500ರೂ. ನಗದು ಹಾಗೂ ಮೊಬೈಲ್ ಕಸಿದು ತೆಗೆದಿದೆ. ನಂತರ ಅರ್ಧ ಲಕ್ಷ ರೂ.ಮೊತ್ತಕ್ಕಾಗಿ ಬೇಡಿಕೆಯಿರಿಸಿ ಕಾರನ್ನು ಮತ್ತಷ್ಟು ವೇಗದಿಂದ ಚಲಾಯಿಸುವ ಮಧ್ಯೆ ಇನ್ನೊಂದು ಕಾರಿಗೆ ಡಿಕ್ಕಿಯಾಗಿದೆ. ಈ ಮಧ್ಯೆ ಕಾರಿನಲ್ಲಿದ್ದವರ ಜತೆ ವಾಗ್ವಾದ ನಡೆಯುತ್ತಿದ್ದಂತೆ ಸ್ಥಳೀಯರು ಒಟ್ಟುಸೇರಿದ್ದು, ಮಾಹಿತಿ ಪಡೆದ ಪೊಲೀಸರೂ ಸ್ಥಳಕ್ಕಾಗಮಿಸುತ್ತಿದ್ದಂತೆ ಆರೋಪಿಗಳು ಪೊಲೀಸರ ಮೇಲೂ ರೇಗಾಡಿದ್ದಾರೆ. ಈ ಮಧ್ಯೆ ಇವರ ಜತೆಗಿದ್ದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
2014 ರಲ್ಲಿ ಕುಂಬಳ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ, ಮಾದಕವಸ್ತು ಕಳ್ಳಸಾಗಣೆ ಮತ್ತು ಮದ್ಯಪಾನಗೈದು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಅಫ್ಜಲ್ ಆರೋಪಿಯಾಗಿದ್ದಾನೆ. ಮಹಮ್ಮದ್ ಮನ್ಸೂರ್ ವಿರುದ್ಧ ಕೊಲೆ ಯತ್ನ, ಶಸ್ತ್ರಾಸ್ತ್ರ ಕೈವಶವಿರಿಸಿದ ಪ್ರಕರಣ ಮತ್ತು ಕಳವು ಪ್ರಕರಣ ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.


