ಕಾಸರಗೋಡು: ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.
ಅವರು ರಾಷ್ಟ್ರೀಯಹೆದ್ದಾರಿ-88ರ ಚೆರ್ಕಳ-ಬೇವಿಂಜ ಪ್ರದೇಶಕ್ಕೆ ಭೇಟಿ ನೀಡಿ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾತನಾಡುತ್ತಿದ್ದರು. ಬೇವಿಂಜ, ಚೆರುವತ್ತೂರು ಮತ್ತು ವೀರಮಲಕ್ಕು ವಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಯ ಪ್ರಗತಿಯನ್ನು ಆರ್‍ಡಿಒಗಳು ಪ್ರತಿದಿನ ಅವಲೋಕಿಸುತ್ತಿದ್ದು, ಮಳೆಗಾಲಕ್ಕೆ ಮೊದಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಳೆಗಾಲದಲ್ಲಿ ದುರಂತ ಸಂಭವಿಸದಂತೆ ತಡೆಯಲು ಕ್ಷಿಪ್ರ ರಕ್ಷಣಾ ತಂಡದ ಕೆಲಸವನ್ನು ಬಲಪಡಿಸಬೇಕು. ಚೆರ್ಕಳ ಪೇಟೆ ಮತ್ತು ಚೆಂಗಳ ಗ್ರಾಮ ಪಂಚಾಯಿತಿ ಕಚೇರಿ ವಠಾರದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಯಿಂದಾಗಿ ಎದುರಾಗಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು.
ನೀರು ತುಂಬಿ ಹರಿಯುವ ಚರಂಡಿಗಳಿಂದ ಹೊರಹರಿಯುವ ನೀರು ಮನೆಗಳಿಗೆ ನುಗ್ಗುವುದನ್ನು ತಡೆಯುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುವುದನ್ನು ತಡೆಯಲು ಒಳಚರಂಡಿ ಶುಚೀಕರಿಸುವುದರೊಂದಿಗೆ ಭೂಕುಸಿತ ತಡೆಗಟ್ಟಲು ಸುರಕ್ಷತಾ ಗೋಡೆ ಬಲಪಡಿಸುಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಸೂಚಿಸಿದರು.
ಈ ಸಂದರ್ಭ ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯಭರತ್ ರೆಡ್ಡಿ, ಎಎಸ್ಪಿ ಅಚ್ಯುತ್ ಅಶೋಕ್, ಆರ್‍ಡಿಒ ಬಿನು ಜೋಸೆಫ್, ಸಹಾಯಕ ಜಿಲ್ಲಾಧಿಕರಿ ಎಲ್.ಎ. ಲಿಪು ಎಸ್. ಲಾರೆನ್ಸ್, ಆರ್‍ಟಿಒ ಜೆ. ಜೆರಾಲ್ಡ್, ಮೋಟಾರ್ ವಾಹನ ಇನ್ಸ್‍ಪೆಕ್ಟರ್ ಎಂ. ವಿಜಯನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಉಮೇಶ್ ಗರ್ಗ್, ನಿರ್ಮಾಣ ಗುತ್ತಿಗೆ ಕಂಪನಿಯ ಪ್ರತಿನಿಧಿಗಳು, ತಹಸೀಲ್ದಾರರು ಮುಂತಾದವರು ಭಾಗವಹಿಸಿದ್ದರು.

.jpeg)

