ತಿರುವಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಆಲಿಂಗನ' ಹೇಳಿಕೆಗೆ ತಿರುಗೇಟು ನೀಡಿರುವ ಕೇರಳಂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ' ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ್ದ ರಾಹುಲ್, ರಾಜಕೀಯ ವೈಷಮ್ಯದ ಕಾರಣ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಿಣರಾಯಿ, ಯಾರು ಯಾರನ್ನು ಅಪ್ಪಿಕೊಳ್ಳುತ್ತಾರೆ ಎಂಬ ಬಗ್ಗೆ ತಮಗೆ ಚಿಂತೆಯಿಲ್ಲ ಎಂದಿದ್ದಾರೆ.
'ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವನ್ನು ನಾವೆಲ್ಲರೂ ನೋಡಿದ್ದೇವೆ. ಮೋದಿ ಅವರನ್ನು ಅಪ್ಪಿಕೊಂಡಿರುವ ಬಗ್ಗೆ ನನಗೆ ಆಕ್ಷೇಪವಿಲ್ಲ. ಬದಲಿಗೆ, ಅವರ ಹೇಳಿಕೆಗಳು ಒಂದು ನಿರ್ದಿಷ್ಟ ರಾಜಕೀಯ ಸಂದೇಶವನ್ನು ಪ್ರತಿನಿಧಿಸುತ್ತವೆ. ಇದು ರಾಹುಲ್ ಗಾಂಧಿ ಅವರ ದೃಷ್ಟಿಕೋನವನ್ನು ಮತ್ತು ಅವರು 'ಇಂಡಿಯಾ' ಮೈತ್ರಿಕೂಟವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದಾರೆ.
ರಾಹುಲ್ ನಡೆಯಿಂದ 'ಇಂಡಿಯಾ'ಕ್ಕೆ ಹಿನ್ನೆಡೆ:
ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಬಗ್ಗೆ ಮಾತನಾಡಿದ ಪಿಣರಾಯಿ, 'ಡಿಎಂಕೆ ಈಗ ಎಲ್ಲಿದೆ ಎಂಬುದನ್ನು ನಾವು ನೋಡಬಹುದು. ಕಾಂಗ್ರೆಸ್‌ನ ನಡೆಯಿಂದ, ಅದರಲ್ಲೂ ಮುಖ್ಯವಾಗಿ ರಾಹುಲ್ ಗಾಂಧಿ ಅವರ ನಡೆಯಿಂದ ಪ್ರಸ್ತುತ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಆರೋಪಿಸಿದ್ದಾರೆ.
'ಈ ನಡೆಯು 'ಇಂಡಿಯಾ' ಮೈತ್ರಿಕೂಟವನ್ನು ಬಲಪಡಿಸುವುದಿಲ್ಲ, ಬದಲಾಗಿ ಬಿಜೆಪಿಗೆ ಸಹಾಯ ಮಾಡುತ್ತದೆ. ಇಂತಹ ಕ್ರಮಗಳ ಮೂಲಕ ರಾಹುಲ್ ಗಾಂಧಿ ಅವರು ಬಿಜೆಪಿಯ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುವಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೇರಳಂ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪಿಣರಾಯಿ ವಿಜಯನ್ ಮತ್ತು ರಾಹುಲ್ ಗಾಂಧಿ ಇಬ್ಬರೂ ತಮ್ಮ ಭಾಷಣಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಿದ್ದರು.

