ತಿರುವನಂತಪುರ: ಶಬರಿಮಲೆಯ ಮುಂದಿನ ಯಾತ್ರೆಯ ಸಂದರ್ಭದಲ್ಲಿ ಜನಸಂದಣಿ ನಿರ್ವಹಣೆಗೆ ತಂತ್ರಜ್ಞಾನ ಮತ್ತು ಎಲ್ಲ ವ್ಯವಸ್ಥೆಗಳ ಡಿಜಿಟಲೀಕರಣ ಸೇರಿ ಹಲವು ಸುಧಾರಣೆಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ.
ಟಿಬಿಪಿ ಸಭೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಯಾತ್ರೆಗೆ ಮುಂಚಿತವಾಗಿಯೇ ಹಲವು ಪೂರ್ವ ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದಾರೆ.
'ಶಬರಿಮಲೆಯ ಹಲವು ವ್ಯವಸ್ಥೆಗಳನ್ನು ಡಿಜಿಟಲಕರಣಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಯಾವುದೇ ನಗದು ಸ್ವೀಕಾರ ಇರುವುದಿಲ್ಲ. ಎಲ್ಲವೂ ಆನ್‌ಲೈನ್ ಆಗಲಿದೆ. ಇದು ಕೇವಲ ಹಣಕಾಸು ವಹಿವಾಟಿಗೆ ಸೀಮಿತವಲ್ಲ. ಆಡಳಿತ ಸಂಬಂಧಿತ ಪ್ರಕ್ರಿಯೆಗೂ ವಿಸ್ತರಿಸುತ್ತಿದ್ದೇವೆ' ಎಂದಿದ್ದಾರೆ.
ಜನಸಂದಣಿ ನಿರ್ವಹಣೆ ಕುರಿತಂತೆ ಬಹುಮುಖ್ಯ ಮಾಹಿತಿ ಹಂಚಿಕೊಂಡ ಅವರು, 'ಶಬರಿಮಲೆಯಲ್ಲಿ ಜನಸಂದಣಿ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಕುರಿತು ಕೊಚ್ಚಿಯಲ್ಲಿ ಜೂನ್ 20ರಂದು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪ್ರಮುಖ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದೇವೆ. ಕಾರ್ಯಾಗಾರದಲ್ಲಿ ಮಾನ್ಯತೆ ಪಡೆದ ಆರು ಮಂದಿ ಎಐ ತಜ್ಞರು ಭಾಗವಹಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.
ನಿಲಕ್ಕಲ್, ಪಂಪಾ, ಮರಕೂಟಂ ಮತ್ತು ಸನ್ನಿಧಾನಂ ಬಳಿ ತೀರ್ಥಯಾತ್ರೆ ವೇಳೆ ಎಐ ಮೂಲಕ ನೈಜ ಸಮಯದ ಜನಸಂದಣಿಯ ಪರಿಸ್ಥಿತಿಗಳ ಮಾಹಿತಿ ಪಡೆದು, ಅದರ ಆಧಾರದ ಮೇಲೆ ಜನಸಂದಣಿ ನಿಯಂತ್ರಿಸುವ ಪ್ರೋಟೊಕಾಲ್ ಅನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳದ್ದಾರೆ.
'ಎಐ ಮೂಲಕ ಜನಸಂದಣಿ ಬಗ್ಗೆ ನೈಜ ಸಮಯದ ಮಾಹಿತಿ ಪಡೆದು ಯಾವ ಸಮಯದಲ್ಲಿ ಎಷ್ಟು ಜನರಿಗೆ ಮುಂದುವರಿಯಲು ಅವಕಾಶ ನೀಡಬಹುದು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದಿದ್ದಾರೆ.

