ನವದೆಹಲಿ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥೆ ಅಲ್ಕಾ ಲಾಂಬಾ ಅವರನ್ನು ದೆಹಲಿ ನ್ಯಾಯಾಲಯವು ಶನಿವಾರ ಬಿಡುಗಡೆ ಮಾಡಿದೆ.
ಜಂತರ್ ಮಂತರ್‌ನಲ್ಲಿ 2024ರಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಅಲ್ಕಾ ಅವರಿಗೆ ಕಳೆದ ತಿಂಗಳಷ್ಟೇ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು.
'ಅಪರಾಧಿಯು ಮಹಿಳೆಯಾಗಿದ್ದು, ಮೊದಲ ಬಾರಿ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯನ್ನು ಅವರು ಹೊಂದಿಲ್ಲ. ಒಂದು ವರ್ಷದ ಅವಧಿಗೆ ₹1 ಲಕ್ಷ ಮೊತ್ತದ ಭದ್ರತಾ ಠೇವಣಿ ಇರಿಸಿಕೊಂಡು ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ' ಎಂದು ನ್ಯಾಯಾಲಯವು ಹೇಳಿದೆ.

